ಮಂಗಳೂರು: ಉದ್ಯೋಗಕ್ಕಾಗಿ ಇಸ್ರೇಲ್ಗೆ ತೆರಳಿದ್ದ ಮಂಗಳೂರಿನ ಶಕ್ತಿನಗರದ ನಿವಾಸಿ ಶೆಡ್ರೆಕ್ ಇಮಾನ್ವೆಲ್ (40) ನಿಗೂಢವಾಗಿ ಮೃತಪಟ್ಟಿದ್ದು, ಅವರ ಮೃತದೇಹ ಇಸ್ರೇಲ್ನಿಂದ ಮಂಗಳೂರಿಗೆ ರವಾನೆಯಾಗಿದೆ. ಗುರುವಾರ ಗೋರಿಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.




ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಶೆಡ್ರೆಕ್ ಅವರು 2025ರ ಮೇ ತಿಂಗಳಲ್ಲಿ ಇಸ್ರೇಲ್ನ ಬೆರ್ಶೆಬಾ ನಗರಕ್ಕೆ ಉದ್ಯೋಗಕ್ಕಾಗಿ ತೆರಳಿದ್ದರು. ತಾಯಿ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ತಾಯ್ನಾಡಿನಲ್ಲಿ ಬಿಟ್ಟು ವಿದೇಶಕ್ಕೆ ತೆರಳಿದ್ದ ಅವರು, ಅಕ್ಟೋಬರ್ 23ರಂದು ರಾತ್ರಿ ಕುಟುಂಬದವರೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ದಿಢೀರನೆ ಕರೆ ಕಡಿತಗೊಂಡಿದ್ದು, ಬಳಿಕ ಅವರ ಸಂಪರ್ಕ ಸಾಧ್ಯವಾಗಿರಲಿಲ್ಲ.
ಮರುದಿನ ಕೆಲಸಕ್ಕೂ ತೆರಳದೆ, ತಾವು ವಾಸವಿದ್ದ ಕೊಠಡಿಗೂ ವಾಪಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿತ್ತು. ಕೂಡಲೇ ಇಸ್ರೇಲ್ ಪೊಲೀಸರಿಗೆ ದೂರು ನೀಡಿದ ಕುಟುಂಬಸ್ಥರು, ಶೆಡ್ರೆಕ್ ಅವರನ್ನು ಪತ್ತೆಹಚ್ಚುವಂತೆ ಮನವಿ ಮಾಡಿದ್ದರು. ತಾಯಿ, ಪತ್ನಿ, ಮಕ್ಕಳು ಹಾಗೂ ಸಹೋದರಿಯು ಶೆಡ್ರೆಕ್ ಅವರನ್ನು ಹುಡುಕಿಕೊಡುವಂತೆ ಕಣ್ಣೀರಿನ ಮನವಿ ಮಾಡಿದ್ದರು.

ಪೊಲೀಸರು ಹಾಗೂ ಸಂಬಂಧಪಟ್ಟವರ ಹುಡುಕಾಟದ ಬಳಿಕ ಶೆಡ್ರೆಕ್ ಅವರ ಮೃತದೇಹ ಪತ್ತೆಯಾಗಿದ್ದು, ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮಂಗಳೂರಿಗೆ ರವಾನಿಸಲಾಗಿದೆ. ಗುರುವಾರ ಗೋರಿಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ವಿದೇಶಕ್ಕೆ ತೆರಳಿದ್ದ ಮಗ ಸುರಕ್ಷಿತವಾಗಿ ಮರಳಿ ಬರುತ್ತಾನೆ ಎಂದು ಕಾಯುತ್ತಿದ್ದ ತಾಯಿಗೆ ಮಗನ ಪಾರ್ಥಿವ ಶರೀರವನ್ನು ಕಾಣುವ ದುರಂತ ಎದುರಾಗಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳ ಬದುಕಿನಲ್ಲಿ ಆಧಾರವಾಗಿದ್ದ ಶೆಡ್ರೆಕ್ ಅವರ ಅಗಲಿಕೆಯಿಂದ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.
ಆದರೆ ಶೆಡ್ರೆಕ್ ಅವರ ಸಾವು ಹೇಗೆ ಸಂಭವಿಸಿದೆ? ಸಾವಿಗೆ ನಿಖರ ಕಾರಣವೇನು? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆತಿಲ್ಲ. ಅವರ ನಿಗೂಢ ಸಾವಿನ ಹಿಂದಿನ ನೈಜ ಕಾರಣ ತಿಳಿದುಬರಬೇಕಿದೆ.

