ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ನೇತ್ರಾವತಿ ನದಿಯು ಜೀವನಾಡಿಯೋ ಹೇಗೋ , ಹಾಗೇ ಕರಾವಳಿ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ 66 ಕೂಡ ಜೀವನಾಡಿ ಇದ್ದ ಹಾಗೆ , ಆದರೆ ಇತ್ತೀಚಿಗಿನ ದಿನಗಳಲ್ಲಿ ಈ ಮಾರ್ಗದಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿದ್ದು ಇದರ ನೇರ ಹೊಣೆಯನ್ನು ಕೇಂದ್ರ ಸರಕಾರ, ಜಿಲ್ಲೆಯ ಸಂಸದರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೊರಬೇಕಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹೇಳಿದರು .
ಅವರು ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ರಾಷ್ಟ್ರೀಯ ಹೆದ್ದಾರಿ 66 ಎಂಬುದು ಉಡುಪಿ ಮತ್ತು ಮಂಗಳೂರನ್ನು ಸಂಪರ್ಕಿಸುವ ಮಾರ್ಗವಾಗಿದೆ . ಈ ಮಾರ್ಗದ ಆಸುಪಾಸಿನಲ್ಲಿ ಹಲವು ಖಾಸಗಿ ಸಂಸ್ಥೆಗಳು ,ಖಾಸಗಿ ಕಾರ್ಖಾನೆಗಳು ಕಾರ್ಯಾಚರಣೆ ನಡೆಸುತ್ತದೆ . ಈ ಮಾರ್ಗವಾಗಿ ಹಲವು ವಾಣಿಜ್ಯ ಚಟುವಟಿಕೆಗಳು ನಡೆಯುತ್ತದೆ .
.ಎಂ ಆರ್ ಪಿ ಎಲ್ , ಬಂದರು , ಕೈಗಾರಿಕಾ ವಲಯಗಳಿಗೆ ದಿನವೂ ಈ ಮಾರ್ಗವಾಗಿ ಘನ ವಾಹನಗಳು ಸಂಚಾರ ನಡೆಸುತ್ತದೆ . ಪಕ್ಕದ ಉಡುಪಿಗೆ ಜಿಲ್ಲೆಗೆ ಎಕ್ಸ್ಪ್ರೆಸ್ ಬಸ್ಸ್ ಸಂಚಾರ ಪ್ರತಿ ಎರಡು ನಿಮಿಷಕ್ಕೊಮ್ಮೆ ಇದೆ ಆದರೂ ಹೊಂಡ ಬಿದ್ದ ಜಾಗಕ್ಕೆ ತೇಪೆ ಹಚ್ಚುವ ಕಾರ್ಯ ನಡೆದಿಲ್ಲ ಎಂದರು .
ಈ ರಸ್ತೆಯು ಹಲವು ದೋಷಗಳನ್ನು ಹೊಂದಿದೆ ಅದಕ್ಕೆ ಪ್ರಮುಖ ಕಾರಣ ಮೂಲ ಭೂತ ಸೌಕರ್ಯ ಕೊರತೆ, ರಸ್ತೆ ವಿನ್ಯಾಸದ ದೋಷ, ಮಳೆಗಾಲ ಸಮೀಪಿಸುವಾಗ ರಸ್ತೆಗೆ ತೇಪೆ ಹಚ್ಚುವ ಕಾರ್ಯ. ಇದು ಅವೈಜ್ಞಾನಿಕ ಕಾಮಗಾರಿಗೆ ಕಾರಣವಾಗಿದೆ . ಮುಖ್ಯ ರಸ್ತೆಗಳ ರೋಡ್ ಗಳಿಗೆ ಟೇಪೆ ಹಚ್ಚುವ ಕಾರ್ಯವನ್ನು ಮೇ ತಿಂಗಳಲ್ಲಿ ಕೈ ಗೊಳ್ಳುತ್ತಾರೆ . ಆದರೆ ಮುಂದೆ ಜೂನ್ ತಿಂಗಳಲ್ಲಿ ಮಳೆ ಬರುವಾಗ ಅದು ಎದ್ದು ಮತ್ತೆ ಗುಂಡಿಯಾಗುತ್ತದೆ .
ಸ್ಥಳೀಯ ಜನಪ್ರತಿನಿಧಿಗಳು , ಲೋಕ ಸಭೆಯ ಸದಸ್ಯರು ,ರಾ .ಹೇ ನಿರ್ವಹಣೆಗೆ ಸಮಂಧಿಸಿದ ಅಧಿಕಾರಿಗಳು ಈ ಕಳಪೆ ರಸ್ತೆಯ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ. ಇದರಿಂದ ಈಗಾಗಲೇ ಅನೇಕರು ಬಲಿಯಾಗಿದ್ದಾರೆ . ೧೫ ದಿನಗಳ ಒಳಗಾಗಿ ಮಂಗಳೂರು ಭಾಗಕ್ಕೆ ಸಂಪರ್ಕಿಸುವ ರಸ್ತೆಯನ್ನು ಸರಿಪಡಿಸಬೇಕು . ಇಲ್ಲದ್ದಿದ್ದರೆ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು .
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರವೂಫ್, ಭಾಸ್ಕರ್.ಕೆ, ಲ್ಯಾನ್ಸಿ ಲೋಟೊ ಪಿಂಟೊ, ಪ್ರಕಾಶ್ ಸಾಲಿಯಾನ್, ಎ.ಸಿ.ವಿನಯರಾಜ್, ಅನಿಲ್ ಕುಮಾರ್, ಸಂಶುದ್ದೀನ್ ಬಂದರ್, ಸಂಶುದ್ದೀನ್ ಕುದ್ರೊಳಿ, ಸುಹಾನ್ ಆಳ್ವ, ಅಶ್ರಫ್ ಬಜಾಲ್, ಕೇಶವ ಮರೋಳಿ, ಅಶೋಕ್ ಡಿ ಕೆ ಉಪಸ್ಥಿತರಿದ್ದರು.