ಸೆಪ್ಟೆಂಬರ್ -23 ರಂದು ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ 2025

ಮಂಗಳೂರು: ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಳೆದ ಹಲವು ವರ್ಷಗಳಿಂದ ತಲಪಾಡಿ ಪರಿಸರದಲ್ಲಿ ಸಾರ್ವಜನಿಕ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ತಿಂಗಳಿಗೆ ಕನಿಷ್ಠ ಎರಡರಂತೆ ಆರೋಗ್ಯ ಅರಿವು ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು ಇದೇ ತಿಂಗಳ ತಾರೀಕು 23 ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ೨೦೨೫ ನ್ನು ಕಾಲೇಜಿನಲ್ಲಿ ಆಯೋಜಿಸಿದೆ ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಬಿ ಪುರಾಣಿಕ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯವನ್ನು ಕಟ್ಟಿಕೊಳ್ಳುವ ಕೆಲಸವನ್ನು ಕಳೆದ ೪ – ೫ ವರ್ಷಗಳಿಂದ ಮಾಡುತ್ತಾ ಬರುತ್ತಿದೆ . ಈ ಬಾರಿಯ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಆಯುರ್ವೇದ ಚಿಕಿತ್ಸಾಪದ್ಧತಿಯಲ್ಲಿ ಸಮಾಜದಲ್ಲಿ ಸೇವಾನಿರತ ಇಬ್ಬರು ವೈದ್ಯರಿಗೆ ವಿಶಿಷ್ಟ ಸೇವೆಯ ಪ್ರಯುಕ್ತ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮವನ್ನು ನಡೆಸುವುದಾಗಿ ತೀರ್ಮಾನಿಸಲಾಗಿದೆ .

ಸನ್ಮಾನವನ್ನು ಹಿತಾಯು ಚಿಕಿತ್ಸಾ ಕೇಂದ್ರದ ಮುಖ್ಯಸ್ಮರಾದ ಡಾ ಶಿವಕುಮಾರ್ ಹಾಗೂ ಸಸ್ಯ ಸಂಜೀವಿನಿ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಆಸ್ಪತ್ರೆಯ ಡಾ ಸೌಮ್ಯಶ್ರೀ ಅವರಿಗೆ ನೀಡಲಾಗುವುದುದೆಂದು ತಿಳಿಸಿದರು .

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂದೀಪ್ ಬೇಕಲ್ ಮಾತನಾಡಿ , ಇಂದು ನಾವು ಸಮಾಜದಲ್ಲಿ ಕಂಡಂತೆ ಆಯುಷ್ಯದ ಪ್ರಮಾಣ ಹೆಚ್ಚಿದರೂ ಆರೋಗ್ಯದ ಗುಣಮಟ್ಟದಲ್ಲಿ ಕುಸಿತವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಈ ಅಪಾಯಕಾರಿ ಬೆಳವಣಿಗೆಯ ಜಾಡು ಹಿಡಿದು ಹೊರಟರೆ ನಮಗೆ ತಿಳಿದುಬರುವ ಸತ್ಯಾಂಶವೆಂದರೆ, ಸಮಾಜದಲ್ಲಿ ಕಂಡುಬರುವ ಬಹುತೇಕ ರೋಗಗಳು ನಮ್ಮ ಜೀವನ ಶೈಲಿಗೆ ಸಂಬಂಧಪಟ್ಟದ್ದು.

ಈ ಹಿನ್ನೆಲೆಯಲ್ಲಿ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದಿನಚರ್ಯಾಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನವು ಸಾರ್ವಜನಿಕರಲ್ಲಿ ಆಯುರ್ವೇದೋಕ್ತ ಜೀವನಶೈಲಿಯನ್ನು ಉತ್ತಮಗೊಳಿಸಿಕೊಂಡು ರೋಗ ರುಜಿನಗಳಿಂದ ಪಾರಾಗುವ ಮಾರ್ಗೋಪಾಯಗಳನ್ನು ಸೂಚಿಸುತ್ತದೆ.

ಈ ಅರಿವು ಕಾರ್ಯಕ್ರಮವನ್ನು ಪ್ರಾತ್ಯಕ್ಷಿಕೆ ಹಾಗು ಕಿರು ಪ್ರಹಸನದ ಮೂಲಕ ಅಭಿನಯಿಸಿ ಪ್ರದರ್ಶಿಸಲಾಗುತ್ತಿದೆ. ಈ ಅಭಿಯಾನವು ಈಗಾಗಲೇ ಪ್ರಾರಂಭವಾಗಿದ್ದು ಮುಂದಿನ 2026 ನೇ ಇಸವಿಯ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯವರೆಗೆ ನಡೆಯಲಿದೆ. ಸಾರ್ವಜನಿಕರು ಹಾಗೂ ಯಾವುದೇ ಸಂಸ್ಥೆಗಳು ಈ ಕಾರ್ಯಕ್ರಮವನ್ನು ನಡೆಸಲು ಬಯಸಿದರೆ ನಮ್ಮ ಸಂಸ್ಥೆಯ ವತಿಯಿಂದ ಸಂಪೂರ್ಣ ಉಚಿತವಾಗಿ ನಡೆಸಿಕೊಡಲಾಗುದೆಂದು ತಿಳಿಸಿದರು.

ಸಂಸ್ಥೆಯು ವೈದ್ಯಕೀಯ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ವಿಶೇಷ ಮರ್ಮಚಿಕಿತ್ಸಾ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಮತ್ತು – CPR – ಹೃದಯಾಘಾತ ಹಾಗು ಇನ್ನಿತರ ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾಗಿರುವ ಜೀವರಕ್ಷಕ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ಸಾರ್ವಜನಿಕವಲಯದಲ್ಲಿ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು .ಸುದ್ದಿಗೋಷ್ಠಿಯಲ್ಲಿ ಡಾ ಪದ್ಮಿಣಿ ಮುಂತಾದವರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!