ಪ್ರಸಿದ್ಧ ಯಕ್ಷಗಾನ ಕಲಾವಿದ ಡಾ. ಕೆರೆಮನೆ ಮಹಾಬಲ ಹೆಗಡೆಯವರ 16ನೆಯ ಸಂಸ್ಮರಣಾ ದಿನ ಮತ್ತು ಕೆರೆಮನೆ ರಾಮ ಹೆಗಡೆಯವರ 6 ನೆಯ ಸಂಸ್ಮರಣಾ ದಿನಗಳ ಅಂಗವಾಗಿ ಇದೇ ಒ.18 ರಂದು ರಂದು ಸಂಜೆ 4 ಗಂಟೆಗೆ ಹೊನ್ನಾವರ ತಾಲೂಕು ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸಾಹಿತಿ, ರಂಗಚಿಂತಕ ಶ್ರೀ ಲಕ್ಷ್ಮೀನಾರಾಯಣ ಶಾಸ್ತ್ರಿ , ನಾಜಗಾರ ( ಬೆಳಗಾವಿ) ಇವರಿಗೆ ಈ ವರ್ಷದ ” ಮಹಾಬಲ ಪ್ರಶಸ್ತಿ ” ನೀಡಿ ಗೌರವಿಸಲಾಗುವುದು.
ಖ್ಯಾತ ಯಕ್ಷಗಾನ ಕಲಾವಿದರಾದ ಪ್ರೊ. ಎಂ. ಎಲ್. ಸಾಮಗ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ,ಪತ್ರಕರ್ತ. ಸಾಹಿತಿ ಶ್ರೀ ಕೃಷ್ಣಮೂರ್ತಿ ಹೆಬ್ಬಾರ ಅವರು ಮುಖ್ಯ ಅತಿಥಿಗಳಾಗಿರುವರು. ನಂತರ ಕೃಷ್ಣ ಸಂಧಾನ ಯಕ್ಷಗಾನ ಕಲಾಪ್ರದರ್ಶನವಿದೆ.
82 ವರ್ಷ ವಯಸ್ಸಿನ ಶ್ರೀ ಶಾಸ್ತ್ರಿಯವರು ಆರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ, ಪತ್ರಿಕೆ, ಯಕ್ಷಗಾನ, ಸಂಗೀತ, ನಾಟಕ ಮತ್ತು ಗಮಕ ಮೊದಲಾದ ಕ್ಷೇತ್ರಗಳಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಅವರನ್ನು ಗೌರವಿಸಲಾಗುತ್ತಿದೆ.