ವಿಟ್ಲ: ಸನಾತನ ಹಿಂದು ಧರ್ಮ ಮತ್ತು ಧಾರ್ಮಿಕ ಸಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ ವಿಟ್ಲ, ಹಲವು ಹಿಂದು ಸಂಘಟನೆಗಳು, ಸಾಮಾಜಿಕ ಮತ್ತು ರೈತ ಸಂಘಟನೆಗಳ ಸಹಯೋಗದೊಂದಿಗೆ 4೦೦ ಕೆವಿ ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಗುರುವಾರ ಬೃಹತ್ ಶಕ್ತಿ ಪ್ರದರ್ಶನ ವಿಟ್ಲ ಸಮೀಪದ ಮಂಗಳಪದವಿನಲ್ಲಿ ನಡೆಯಿತು .
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆಗಳ ಜನರು ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೇ ಅದೆಷ್ಟು ಭೂಮಿ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು, ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ಕಳೆದುಕೊಂಡಿದ್ದಾರೆ. ಆದರೆ ತಮ್ಮ ಬದುಕಿನ ಅಸ್ತಿತ್ವಕ್ಕೆ ಘಾಸಿ ಕೊಡುವಂತಹ ಸನ್ನಿವೇಶಗಳು ಎದುರಾದಾಗ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಸೂಕ್ತ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಧಾರ್ಮಿಕ ಚಿಂತಕ ಮಂಜುನಾಥ ಉಡುಪಿ ದಿಕ್ಸೂಚಿ ಭಾಷಣ ಮಾಡಿ, ಸ್ವಾರ್ಥ ಮತ್ತು ಲಾಭದ ಉದ್ದೇಶದಿಂದ ಈ ಯೋಜನೆ ನಡೆಯುತ್ತಿದೆ. ನಪುಂಸಕತ್ವ, ಮಣ್ಣಿನ ಸಾರ ನಾಶ, ಪಶು, ಪಕ್ಷಿ,ಉರಗಗಳ ಸಂತಾನ, ಪ್ರಕೃತಿ ನಾಶಕ್ಕೆ ಕಾರಣ ವಾಗುವ, ನೂರಾರು ದೇಗುಲ, ದೈವಸ್ಥಾನ, ಚರ್ಚ್, ಮಸೀದಿ ಇನ್ನಿತರ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಧಕ್ಕೆಯಾಗುವ ಈ ಯೋಜನೆಯನ್ನು ಯಾವುದೇ ಬೆಲೆ ತೆತ್ತಾದರೂ ನಿಲ್ಲಿಸದೇ ಹೋದರೆ ಸಾವಿರಾರು ಕುಟುಂಬಗಳು ಬೀದಿಗೆ ಬರಬೇಕಾಗುತ್ತದೆ, ಯೋಜನೆ ನಿಲ್ಲಿಸುವ ತನಕ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಬರುವ ತನಕ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಬಂಟ್ವಾಳ ತಾಲೂಕು ತಹಸೀಲ್ದಾರ್ ಮಂಜುನಾಥ ಜಿ. ಪ್ರತಿಭಟನೆಕಾರರ ಮನವೊಲಿಸಲು ಯಶಸ್ವಿಯಾದರು. ವಿದ್ಯುತ್ ಪ್ರಸರಣ ಯೋಜನೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಗುತ್ತಿಗೆ ವಹಿಸಿಕೊಂಡವರಿಗೆ ತಿಳಿಸಲಾಗಿದೆ ಮುಂದಿನ ವಾರದೊಳಗೆ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡು ಸಾರ್ವಜನಿಕ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆ ಕಾರರು ಸಲ್ಲಿಸಿದ ಮನವಿ ಸ್ವೀಕರಿಸಿದರು.
ಮಂಗಳ ಪದವಿನಲ್ಲಿ ನಡೆದ ಬೃಹತ್ ಸಭೆಯ ಬಳಿಕ ಕೆಲಿಂಜ ಉಳ್ಳಾಲ್ತಿ ಅಮ್ಮನ ಸನ್ನಿಧಿಗೆ ಪಾದಯಾತ್ರೆ ನಡೆಯಿತು. ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ಹಿಂದೂ ಜಾಗರಣ ವೇದಿಕೆಯ ನರಸಿಂಹ ಶೆಟ್ಟಿ ಮಾಣಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲು ಗುತ್ತು, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಅಕ್ಷಯ ರಜಪೂತ್ ಕಲ್ಲಡ್ಕ, ಇದಿನಬ್ಬ ನಂದಾವರ, ಅಲ್ಫಾನ್ಸ್ ಡಿಸೋಜ, ಮನೋಹರ ಶೆಟ್ಟಿ ನಡುಕಂಬಳಗುತ್ತು, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಟ್ಲದ ಸನಾತನ ಹಿಂದೂ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ, ಅಧ್ಯಕ್ಷ ಶಿವಾನಂದ, ಕಾರ್ಯದರ್ಶಿ ಬಿ.ದೇವಿಪ್ರಸಾದ ಶೆಟ್ಟಿ ಭಾಗವಹಿಸಿದ್ದರು.ಚಿತ್ತರಂಜನ್ ಪ್ರಸ್ತಾವನೆಗೈದರು. ಶ್ಯಾಂ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.ಹಿಂದೂ ಮುಸ್ಲಿಂ ಕ್ರೈಸ್ತರು ಎಂಬ ಬೇಧವಿಲ್ಲದೇ ಎಲ್ಲಾ ಸಮುದಾಯದ ರೈತರು, ಕೃಷಿಕರು ಪಾಲ್ಗೊಂಡಿದ್ದರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ರೈತ ಸಂಘಟನೆಗಳ ಮುಖಂಡರು, ಯೋಜನೆಯ ಸಂತ್ರಸ್ತರ ಕುಟುಂಬ ಸದಸ್ಯರು ಪ್ರತಿಭಟನೆಯಲ್ಲಿ ಸಹಭಾಗಿಗಳಾದರು.