ಅಕ್ಟೋಬರ್ 19 ರಂದು ಮಂಗಳೂರಿನ ಕುದ್ರೋಳಿ ಕ್ಷೇತ್ರದಲ್ಲಿ 25 ನೇ ವರ್ಷದ ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆ , ವಿಜೇತರಿಗೆ ಆಕರ್ಷಕ ಚಿನ್ನದ ಪದಕ

ಮಂಗಳೂರು : ಪ್ರಪ್ರಥಮ ತುಳು ವಾರ್ತಾವಾಹಿನಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ನಮ್ಮ ಕುಡ್ಲ ವಾಹಿನಿ ವತಿಯಿಂದ 25ನೇ ವರ್ಷದ ನಮ್ಮ ಕುಡ್ಲ ಗೂಡು ದೀಪ ಸ್ಪರ್ಧೆ ಅಕ್ಟೋಬರ್ 19 ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಸಂಜೆ 4.30ಕ್ಕೆ ಆರಂಭಗೊಳ್ಳಲಿದೆ ಎಂದು ನಮ್ಮ ಕುಡ್ಲ ನಿರ್ದೇಶಕ ಹರೀಶ್ ಬಿ ಕರ್ಕೇರ ತಿಳಿಸಿದರು .ಅವರು ನಗರದ ಪತ್ರಿಕಾಭವನದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಗೂಡುದೀಪಗಳು ಮರೆಯಾಗುತ್ತಿರುವ ಕ್ಷಣದಲ್ಲಿ ನಮ್ಮ ಕುಡ್ಲ ವಾಹಿನಿ ಗೂಡುದೀಪ ರಚನೆಗೆ ವಿಶೇಷ ಮನ್ನಣೆಯನ್ನು ನೀಡಿ ಸ್ಪರ್ಧೆ ಆರಂಭಿಸುವ ಮೂಲಕ ಜನಮಾನಸದಲ್ಲಿ ಗೂಡುದೀಪಗಳನ್ನು ಮತ್ತೆ ಬೆಳಕಿಗೆ ತರುವ ಪ್ರಯತ್ನ ಮಾಡಿದೆ ಎಂದರು.

ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರ ಹೆಚ್ಚಿನ ಮಾಹಿತಿಯನ್ನು ನೀಡಿ , ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ಎನ್ನುವ ಮೂರು ವಿಭಾಗಗಳಲ್ಲಿ ಯಾವುದೇ ವಯೋಮಾನದ ನಿರ್ಬಂಧವಿಲ್ಲದೇ ಸ್ಪರ್ಧೆ ನಡೆಯುತ್ತದೆ. ಸ್ಪರ್ಧಾ ವಿಜೇತರಿಗೆ ಚಿನ್ನದ ಪದಕ ಬಹುಮಾನವಾಗಿ ನೀಡಲಾಗುವುದು .ಸ್ಪರ್ಧೆಯಲ್ಲಿ 50 ಪ್ರೋತ್ಸಾಹಕ ಬಹುಮಾನ ಹಾಗೂ ವಿಶೇಷ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತಿದೆ ಎಂದರು.

ಸ್ಪರ್ಧಾ ಸಲಹೆಗಾರ ದಯಾನಂದ ಕಟೀಲು ಮಾತನಾಡಿ, ಈ ವರ್ಷ ಖ್ಯಾತ ಸಿನೆಮಾ ನಟ, ಆಕಾಶವಾಣಿ ಎ ಗ್ರೇಡ್ ಕಲಾವಿದ ಲಕ್ಷ್ಮಣ ಕುಮಾರ್ ಮಲ್ಲೂರು ಅವರಿಗೆ ನಮ್ಮ ಕುಡ್ಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಜೊತೆಗೆ ನಾಡೋಜ ಡಾ.ಜಿ.ಶಂಕರ್ ಅವರಿಗೆ ನಮ್ಮ ತುಳುವೆ‌ರ್ ಪ್ರಶಸ್ತಿ, ಯುವವಾಹಿನಿ ಸಂಸ್ಥೆಗೆ ಬಿ.ಪಿ.ಕರ್ಕೇರ ಸೇವಾ ಪ್ರಶಸ್ತಿ, ಗೀತಾ ಶೆಟ್ಟಿ ಅವರಿಗೆ ಲಕ್ಷ್ಮೀ ಕರ್ಕೇರ ಪ್ರಶಸ್ತಿ, ಶೋಧಿತ್ ಅಮೀನ್ ಬೈಕಂಪಾಡಿ ಇವರಿಗೆ ಬಾಲ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಎಸ್ ಸಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ ವೆಂಕಟ್ರಮಣ ಅಕ್ಕರಾಜು ಇವರನ್ನು ಸನ್ಮಾನಿಸಲಾಗುವುದೆಂದು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ನಿರ್ದೇಶಕರಾದ ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಮಾರುಕಟ್ಟೆ ವಿಭಾಗ ಮ್ಯಾನೇಜ‌ರ್ ಸುದರ್ಶನ್ ಕೋಟ್ಯಾನ್, ಕ್ಯಾಮೆರಾಮನ್ ಜಯಂತ್ ಉಳ್ಳಾಲ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!