ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯನ್ನು ಮಂಗಳೂರಲ್ಲಿ ಬಂಧಿಸಲಾಗಿದೆ. ಬೆಳ್ತಂಗಡಿ ಮಾಲಾಡಿ ಗ್ರಾಮದಲ್ಲಿ ಪ್ರೇಮಾ ಶೆಟ್ಟಿ ಎಂಬವರ ಮನೆಯಿದ್ದು, ಇವರು ಕೆಲ ಸಮಯದಿಂದ ವಿದೇಶದಲ್ಲಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಗೆ ಸಿ.ಸಿ ಟಿ.ವಿ ಆಳವಡಿಸಿದ್ದರು. ದಿನಾಂಕ:9/11/2025 ರ ಬೆಳಿಗ್ಗೆ ಪ್ರೇಮಾರವರ ಮಗಳು ದೂರುದಾರರಾದ ನಿವಾಸಿ ಪ್ರಕಾಶ್ ಶೆಟ್ಟಿ (53) ಎಂಬವರಿಗೆ ಕರೆ ಮಾಡಿ ಅವರ ತಾಯಿಯ ಮನೆಯಲ್ಲಿ ಯಾರೋ ವ್ಯಕ್ತಿ ಕಳ್ಳತನಕ್ಕೆ ಬಂದಿರುವಂತೆ ಸಿ.ಸಿ ಟಿ.ವಿಯಲ್ಲಿ ಕಾಣುತ್ತಿರುವುದಾಗಿ ತಿಳಿಸಿದ್ದಾರೆ.
ತಕ್ಷಣ ದೂರುದಾರರು ಪ್ರೇಮರ ಮನೆಯ ಬಳಿ ತೆರಳಿ ನೋಡಿದಾಗ ಪ್ರೇಮಾರ ಮನೆಯ ಮೇಲ್ಚಾವಣಿಯಲ್ಲಿ ಓರ್ವ ಅಪರಿಚಿತ ವ್ಯಕ್ತಿಯು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ನಿಂತುಕೊಂಡಿದ್ದು, ದೂರುದಾರರನ್ನು ನೋಡಿ ಕೆಳಗೆ ಹಾರಿ ಓಡಿ ತಪ್ಪಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದಾಗ ಅಪರಿಚಿತ ವ್ಯಕ್ತಿಯು ಆತನ ಕೈಯಲ್ಲಿದ್ದ ರಾಡಿನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಸ್ಥಳೀಯ ನಿವಾಸಿಗಳ ಸಹಾಯದಿಂದ ಅಪರಿಚಿತ ವ್ಯಕ್ತಿಯನ್ನು ಹಿಡಿಯಲಾಯ್ತು. ಆತನ ಬಗ್ಗೆ ವಿಚಾರಿಸಿದಾಗ ಕಳ್ಳ ಕೇರಳ ಮೂಲದ, ತಲಪಾಡಿ ನಿವಾಸಿ ಕಿರಣ್ ಎಂಬುದಾಗಿ ತಿಳಿಸಿದ್ದು, ನಂತರ ಆತನನ್ನು ಪೂಂಜಾಲಕಟ್ಟೆ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 73/2025, ಕಲಂ: 331(1) 62 118(1) 307 BNS ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಆರೋಪಿತನ ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸೇರಿದಂತೆ, ಒಟ್ಟು 13 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.