ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ನಡೆಸಲ್ಪಡುವ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ವರುಷದ ತಿರುಗಾಟದ ಆರಂಭೋತ್ಸವದಂದು ಏಳನೆಯ ಮೇಳದ ಪಾದಾರ್ಪಣೆಯು ನವೆಂಬರ್ 16ರ ಭಾನುವಾರದಂದು ನಡೆಯಲಿದ್ದು . ತಾ. 15ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಎಂಟು ಸ್ತಬ್ಧಚಿತ್ರಗಳಲ್ಲಿ ಕಟೀಲಿನ ಏಳೂ ಮೇಳಗಳ ದೇವರು, ತೊಟ್ಟಿಲು. ಚಿನ್ನ ಬೆಳ್ಳಿಗಳ ಕಿರೀಟ ಇತ್ಯಾದಿ ಪರಿಕರಗಳನ್ನು ವೈಭವದ ಮೆರವಣಿಗೆಯಲ್ಲಿ ಬಜಪೆಯಿಂದ ಕಟೀಲಿಗೆ ತಂದು ದೇವರಿಗೆ ಒಪ್ಪಿಸಲಾಗುವುದೆಂದು ದೇವಾಲಯದ ಆನುವಂಶಿಕ ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಬಹು ಕಾಲದಿಂದಲೂ ಭಕ್ತ ವಲಯದಿಂದ ಮೇಳದ ಆಟಕ್ಕೆ ಬೇಡಿಕೆ ಹೆಚ್ಚುತಲೇ ಇದೆ . 10 ರಿಂದ 15 ವರ್ಷದ ದೀರ್ಘವಧಿಯ ಮೇಳದ ಪ್ರಸಂಗಕ್ಕೆ ನೋಂದಣಿ ಆಗಿದೆ . ಭಕ್ತರಿಗೆ ಯಕ್ಷಗಾನ ಬಯಲಾಟ ಹರಿಕೆಯು ಬೇಗನೆ ಸಂಪನ್ನಗೊಳ್ಳಬೇಕೇನುವ ಉದ್ದೇಶದಿಂದ ೭ ನೇ ಮೇಳಕ್ಕೆ ದೇವಾಲಯವು ಚಾಲನೆಯನ್ನು ನೀಡಲಿದೆ . ಈಗಾಗಲೇ ಏಳನೆಯ ಮೇಳಕ್ಕೆ ಭಕ್ತರು , ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದ ದೇವರ ಕಿರೀಟಗಳು, ತೊಟ್ಟಿಲು. ಚಿನ್ನಬೆಳ್ಳಿಗಳ ಆಯುಧ, ಆಭರಣಗಳನ್ನು ಸೇವೆಯ ಮೂಲಕ ನೀಡಿರುತ್ತಾರೆ .
ಬಜಪೆಯಿಂದ ನಡೆಯುವ ಮೆರವಣಿಗೆಯ ಸಮಾರಂಭವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಉದ್ಘಾಟಿಸಲಿದ್ದಾರೆ , ಈ ಸಂದರ್ಭದಲ್ಲಿ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಶ್ಯಾಂ ಭಟ್, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಅಭಯಚಂದ್ರ ಜೈನ್, ಕೃಷ್ಣ ಪಾಲೇಮಾರ್, ಶಾಸಕರಾದ ಉಮಾನಾಥ ಕೋಟ್ಯಾನ್, ಮಿಥುನ್ ರೈ ಮತ್ತು ಮೊದಲಾದ ಗಣ್ಯರು ಈ ಸಂದರ್ಭ ಉಪಸ್ಥಿತರಿರಲಿದ್ದಾರೆ ಎಂದರು .ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಗಳಲ್ಲಿ ಮೇಳಗಳ ದೇವರು, ಪರಿಕರಗಳೊಂದಿಗೆ ವೇದಘೋಷ, ಮೂರು ಸಾವಿರದಷ್ಟು ಮಂದಿ ಭಜನೆಯಲ್ಲಿ, ನಾಲ್ಕಕ್ಕೂ ಹೆಚ್ಚು ಚೆಂಡೆ ತಂಡಗಳು, ವಾದ್ಯ, ಡೋಲು, ಕೊಂಬು, ಸ್ಯಾಕ್ರೋಫೋನ್, ನಾಗಸ್ವರ, ಬೇತಾಳ, ಕೀಲುಕುದುರೆ, ಹುಲಿವೇಷ ಇತ್ಯಾದಿಗಳು ಇರಲಿವೆ. ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಎಕ್ಕಾರಿನಿಂದ ಕಟೀಲುವರೆಗೆ ಕಾಲ್ನಡಿಗೆಯಲ್ಲಿ ಬಂದು ಮೇಳದ ಸ್ವತ್ತುಗಳನ್ನು ದೇವರಿಗೆ ಸಮರ್ಪಿಸಲಾಗುವುದೆಂದು ತಿಳಿಸಿದರು .
ತಾ. 14ರಂದು ಶ್ರೀ ಸನ್ನಿಧಿಯಲ್ಲಿ ಚಂಡಿಕಾಹೋಮ, ಅಷ್ಟೋತ್ತರಶತ ನಾರಿಕೇಲ ಗಣಯಾಗ, ಆಗುತ್ತಾರಣ ಪೂಜೆ ನಡೆಯಲಿಕ್ಕಿದೆ , ತಾ. 16ರಂದು ಬೆಳಿಗ್ಗೆ 10.30ಕ್ಕೆ ಪೂಜಾ ಕಿರೀಟಗಳ ಸ್ಥಾಪನೆ, ಆವಾಹನೆ, ಸಂಜೆ 3 ಗಂಟೆಗೆ ತಾಳಮದ್ದಲೆ ಇಡುವುದು. 5 ಗಂಟೆಗೆ ಗೆಜ್ಜೆ ಕಟ್ಟುವುದು, ಮೇಳಗಳ ಆರಂಭದ ವಿಧಿವಿಧಾನಗಳು, 6ಕ್ಕೆ ಏಳನೆಯ ಮೇಳದ ಉದ್ಘಾಟನೆ, ರಾತ್ರಿ .8.30ಕ್ಕೆ ಮೇಳಗಳ ದೇವರ ಪೂಜೆ, ಬಯಲಾಟ ಪಾಂಡವಾಶ್ವಮೇಧ ನಡೆಯಲಿದೆ. ಸಂಜೆ 6ಕ್ಕೆ ನಡೆಯುವ ಸಭಾಕಾರಕ್ರಮದಲ್ಲಿ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗದಡಿ, ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಉಮನಾಥ ಕೋಟ್ಯಾನ್ ಸಹಿತ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು .ಕಟೀಲು ಏಳನೆಯ ಮೇಳಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಯಕ್ಷ ಸಪ್ತಾಹ ಈಗಾಗಲೇ ನಡೆಯುತ್ತಿದೆ ಎಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಕೊಡೆತ್ತೂರುಗುತ್ತು ಸನತ್ಕುಮಾರ ಶೆಟ್ಟಿ , ಸನ್ನಿಧಿಯ ಆನುವಂಶಿಕ ಮೊಕ್ತೇಸರು ಹಾಗೂ ಆನುವಂಶಿಕ ಅರ್ಚಕರಾದ ವಾಸುದೇವ ಆಸ್ರಣ್ಣ , ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ , ಆನಂತಪದ್ಮನಾಭ ಆಸ್ರಣ್ಣ , ಮೇಳದ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ , ಬಿಪಿನ್ಚಂದ್ರ ಶೆಟ್ಟಿ, ಕೊಡೆತ್ತೂರುಗುತ್ತು ಉಪಸ್ಥಿತತರಿದ್ದರು .