ಬೆಮ್ಮೆರೆ ಸೃಷ್ಟಿಯ ತುಳು ನಾಡಿನ ಕೆಲವು ಸಂಪ್ರದಾಯ ಆಚರಣೆಗಳು ಈ ಮಣ್ಣಿನ ಸತ್ಯವನ್ನು ಸತ್ವವನ್ನು ಇನ್ನೂ ಜೀವಂತವಾಗಿರಿಸಿದೆ ಎಂದರೆ ತಪ್ಪಾಗಲಾರದು ಇಂತಹ ಆಚರಣೆಗಳು ನಮ್ಮ ಶ್ರೀಮಂತಿಕೆಯನ್ನು ಮುಂದಿನ ತಲೆಮಾರಿಗೆ ತಿಳಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಇಂತಹ ಆಚರಣೆಯಲ್ಲಿ ಕೆಲವು ವೈಜ್ಞಾನಿಕ ಸತ್ಯವೂ ಅಡಗಿರುತ್ತದೆ.
ಆಟಿಡೊಂಜಿ ಕೂಟ, ಪತ್ತನಾಜೆ, ಕೇಡ್ಡಸ, ಕುರಲ್ ಪರ್ಬ. ಮುಂತಾದ ಆಚರಣೆಗಳು ಸಂಪ್ರದಾಯದ ತಲಹದಿಯಲ್ಲಿ ಹಾದಿ ತಪ್ಪದೇ ಆಚರಿಸಲ್ಪಡುವ ಅಗತ್ಯವಿದೆ.
ಇಂತಹ ಸಂಪ್ರದಾಯದ ಆಚರಣೆಯಲ್ಲಿ ಪ್ರಮುಖವಾದ ಒಂದು ಆಚರಣೆಯೇ ‘ ಪತ್ತನಾಜೆ’. ಈ ಆಚರಣೆಯು ತುಳುವಿನ ಬೆಷ್ಯ ಅಂದರೆ ವೃಷಭ ಮಾಸದಲ್ಲಿ ಬರುತ್ತದೆ. ಬೆಷ್ಯ ಸಂಕ್ರಮಣ ಸೇರಿ ಹತ್ತನೇ ದಿನಕ್ಕೆ ಪತ್ತನಾಚೆ ಆಚರಿಸಲ್ಪಡುತ್ತದೆ. ಪತ್ತ ನಾಜೆ ನಂತರ ತುಳುನಾಡಿನಲ್ಲಿ ನೇಮ, ಕೋಲ, ಅಂಕ ಆಯನ ಮುಂತಾದ ಧಾರ್ಮಿಕ ಕಾರ್ಯಗಳು ನಿಷಿದ್ಧ. ಅಂದರೆ ಈ ಎಲ್ಲಾ ಧಾರ್ಮಿಕ ಕಾರ್ಯಗಳು ಪತ್ತನಾಜೆಗೆ ಕೊನೆಗೊಳ್ಳಬೇಕಿದೆ. ಮತ್ತೆ ದೀಪಾವಳಿಗೆ ಪುನರಾರಂಭಗೊಳ್ಳುವುದು ವಾಡಿಕೆ. ಪತ್ತನಾಜೆ ಯಂದು ಪತ್ತ್ ಪನಿ ಬರ್ಸ ಬರೊಡು, ಅಪಗ ಬೆಷ್ಯ ದ ಬೇಂಕೇ ಮಾಜುಂಡು. ( ಪತ್ತನಾಜೆ ಯಂದು ಹತ್ತು ಹನಿಮಳೆ ಬರಬೇಕು, ಆಗ ವೃಷಭ ಮಾಸದ ಸುಡುಬಿಸಲು ಮಾಯವಾಗಿ ತಂಪು ಆವರಿಸುತ್ತದೆ ಎಂಬ ನಂಬಿಕೆ ).
ಈ ಆಚರಣೆಗೆ ಅದ್ಭುತವಾದ ವ್ಯಾಖ್ಯಾನವಿದೆ. ಪತ್ತನೆ ಎಂದರೆ ಹತ್ತನೇ ಎಂದರ್ಥ, ಅಜೆ ಎಂದರೆ ಹೆಜ್ಜೆ ಎಂದರ್ಥ ವಾಗಿದೆ. ಹಿಂದಿನ ದಿನಗಳಲ್ಲಿ ಪತ್ತನಾಜೆಯಿಂದ ಗದ್ದೆಯಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡು 18ನೇ ದಿನದಂದು ನೇಜಿ ನೆಡುವ ಸಂಪ್ರದಾಯವಿತ್ತು. ಮೇ ತಿಂಗಳಿನಿಂದ ನವಂಬರ್ ವರೆಗೆ ಕೃಷಿ ಕಾರ್ಯದ ಚಟುವಟಿಕೆ ಬಿರುಸುಗೊಳ್ಳುವ ಕಾರಣ ಈ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳು ಇದ್ದರೆ ಅದು ಕೃಷಿ ಕಾರ್ಯಕ್ಕೆ ತೊಂದರೆಯಾಗುವ ಕಾರಣದಿಂದ ಪತ್ತನಾಜೆ ಆಚರಿಸಲ್ಪಡುವ ಸಂಪ್ರದಾಯ ಈ ಸಮಸ್ಯೆಗೆ ಪರಿಹಾರವಾಯಿತು.
ವರ್ಷ ಪತ್ತನಾಜೆ ಯು ಮೇ 24ರಂದು ಆಚರಿಸಲ್ಪಡುತ್ತದೆ.
ಪತ್ತನಾಜೆ ಯಂದು ತುಳುನಾಡಿನ ಎಲ್ಲಾ ದೈವಸ್ಥಾನಗಳಲ್ಲಿ ದೈವಗಳಿಗೆ ವಿಶೇಷ ರೀತಿಯ ತಂಬಿಲ ಸೇವೆ ನೀಡುವ ಮೂಲಕ ದೈವಾರಾಧನೆಗೆ ಬಹಳ ಮಹತ್ವವನ್ನು ನೀಡಲಾಗುತ್ತದೆ.
ಪ್ರಕೃತಿಯ ಏರುಪೇರುಗಳಿಂದ, ಹವಾಮಾನ ವೈಪರಿತ್ಯದಿಂದ, ಪ್ರಾಕೃತಿಕವಾಗಿ ಕೆಲವು ಬದಲಾವಣೆಗಳು ಆದರೂ ನಂಬಿಕೆ ಮತ್ತು ಆಚರಣೆಗಳಲ್ಲಿ ಯಾವುದೇ ಬದಲಾವಣೆ ಆಗದಿರುವುದು ತುಳು ನಾಡಿನ ಮಹಿಮೆಯಾಗಿದೆ. ಮುಂದಿನ ದಿನಗಳಲ್ಲಿಇದರ ಆಚರಣೆಯು ಇನ್ನೂ ವ್ಯಾಪಕ ವಾಗಬೇಕಾದ ಅಗತ್ಯವಿದ್ದು ತನ್ಮೂಲಕ ಪತ್ತನಾಜೆ ಯ ಮಹತ್ವ ವಿಶ್ವ ವ್ಯಾಪಕವಾಗಬೇಕಿದೆ