ಮಂಜೇಶ್ವರ : ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಶೈಲಿಯಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲೇ ಜನ ಮನ್ನಣೆಯನ್ನು ಪಡೆದಿರುವ ಮಂಜೇಶ್ವರ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025 – 26 ನೇ ಅಧ್ಯಯನ ವರ್ಷದ 27ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ ಹಾಗೂ ಸಡಗರದೊಂದಿಗೆ ಭಾರೀ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ತಂದೆ ತಾಯಿ ಶಿಕ್ಷಕರನ್ನು ಹೇಗೆ ಯಾವ ರೀತಿಯಲ್ಲಿ ಗೌರವಿಸಬೇಕು ಎಂಬುದರ ಬಗ್ಗೆ ಅರಿವನ್ನು ಮೂಡಿಸುವ ಜೊತೆಯಾಗಿ “ಜ್ಞಾನ ಬೆಳೆದಂತೆ, ವ್ಯಕ್ತಿತ್ವದ ಮಟ್ಟವೂ ಎತ್ತರವಾಗುತ್ತದೆ” ಎಂಬ ಘೋಷಣೆಯೊಂದಿಗೆ ಎಲ್ಲಾ ವರ್ಷದಂತೆ ಈ ವರ್ಷ ಕೂಡಾ ಕೂಡಾ ಶಾಲಾ ವಾರ್ಷಿಕೋತ್ಸವವು ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ ಉಳಿಯಿತು. ವಿದ್ಯೆ, ಶಿಸ್ತು, ಸೃಜನಶೀಲತೆ ಹಾಗೂ ವಿದ್ಯಾರ್ಥಿ-ಶಿಕ್ಷಕರ ಸಮಗ್ರ ಬೆಳವಣಿಗೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಈ ಕಾರ್ಯಕ್ರಮ ಜರುಗಿತು. ಶಾಲೆಯ ಶೈಕ್ಷಣಿಕ ಗುಣಮಟ್ಟ, ಸಂಸ್ಕೃತಿಯ ಪರಂಪರೆ ಮತ್ತು ವಿದ್ಯಾರ್ಥಿಗಳ ಪ್ರತಿಭಾವಿಕಾಸಕ್ಕೆ ನೀಡುತ್ತಿರುವ ಮಹತ್ವವನ್ನು ಈ ಆಚರಣೆ ಮತ್ತೊಮ್ಮೆ ಜನರ ಮುಂದೆ ತಂದು ನಿಲ್ಲಿಸಿತು.
ಕಾರ್ಯಕ್ರಮವು ಭಾರೀ ಉತ್ಸಾಹದೊಂದಿಗೆ ಆರಂಭಗೊಂಡಿದ್ದು, ಮುಖ್ಯ ಅತಿಥಿಗಳ ಆಗಮನದಿಂದ ಮೆರಗು ಪಡೆದುಕೊಂಡಿತು. ಶಾಲಾ ಪ್ರಾರ್ಥನೆ ಮತ್ತು ಸ್ವಾಗತ ನೃತ್ಯದ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಮುಖ್ಯ ಅತಿಥಿಗಳ ಭಾಷಣವು ವಿದ್ಯಾರ್ಥಿಗಳಿಗೆ ಪ್ರೇರಣೆಯ ದೀಪವಾಗಿ ನೇತಾಡಿತು. ಶಾಲೆಯ ಸಾಧನೆಗಳು—ಶೈಕ್ಷಣಿಕ ಫಲಿತಾಂಶಗಳಲ್ಲಿ ಕಂಡುಬಂದ ಉತ್ತೇಜನಕಾರಿ ಬದಲಾವಣೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಬಹುಮುಖ್ಯ ಗೆಲುವುಗಳು ಎಲ್ಲವೂ ಸೇರಿದ ಪೋಷಕರು ಹಾಗೂ ಸಭಿಕರಿಂದ ಭರ್ಜರಿ ಪ್ರಶಂಸೆಯನ್ನು ಪಡೆದವು.
ಶಾಲಾ ಮ್ಯಾನೇಜರ್ ವಂದನೀಯ ಗುರು ಎಡ್ವಿನ್ ಫ್ರಾನ್ಸಿಸ್ ಪಿಂಟೋ ರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಕಾಸರಗೋಡು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾಕ್ಟರ್ ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ ಮುಖ್ಯ ಅತಿಥಿಯಾಗಿ ಉಪಸ್ಥರಿದ್ದರು. ಅದೇ ರೀತಿ ವಂದನೀಯ ಗುರು ಡೊಮೆನಿಕ್ ಸಂತೋಷ್ ಸಿಕ್ವೇರಾ ಅತಿಥಿಗಳಾಗಿ ಉಪಸ್ಥಿತರಿದ್ದರು. ಅದೇ ರೀತಿ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಅನಿತಾ ವೇಗಸ್ ,ವಿಜಿತ್ ಡಿ ಸೋಜ ಹಾಗೂ ಶ್ರೀಮತಿ ಕ್ರಿಸ್ತಿನ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ಉಷಾ ಕಿರಣ್ ವರದಿ ಮಂಡಿಸಿದರು.
ಬಳಿಕ ವೇದಿಕೆಯಲ್ಲಿ ಜಿಲ್ಲಾ ಮಟ್ಟದಲ್ಲೂ, ರಾಜ್ಯ ಮಟ್ಟದಲ್ಲೂ ವಿಜ್ಞಾನ, ಕಲೆ, ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅದೇ ರೀತಿ ಶಾಲೆಯಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳನ್ನು ಕೂಡಾ ವಿಶೇಷ ಗೌರವ ನೀಡಿ ಪ್ರೋತ್ಸಾಹಿಸಲಾಯಿತು.ಇನ್ಟೇಂಟ್ ಜೀಸಸ್ ಶಾಲೆ ಒಂದು ಸಂಸ್ಥೆಯಷ್ಟೇ ಅಲ್ಲ, ಕಾಲದಹಾದಿಯಲ್ಲಿ ಪರಸ್ಪರ ಬೆಳೆಸಿಕೊಂಡು ಬಲಗೊಳ್ಳುವ ಒಗ್ಗಟ್ಟಿನ ಕುಟುಂಬವಾಗಿರುವುದನ್ನು ಕಾರ್ಯಕ್ರಮ ಮತ್ತೊಮ್ಮೆ ನೆನಪಿಸಿದೆ.
ಕಾರ್ಯಕ್ರಮದ ಆರಂಭದಿಂದ ಕೊನೆ ತನಕ ವಿದ್ಯಾರ್ಥಿಗಳ ನಿರೂಪಣಾ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿಯವರು ಮಾತನಾಡಿ (bytes1): ಯುವಕರು ದೊಡ್ಡ ಕನಸು ಕಾಣಬೇಕು. ಅವರ ಕನಸುಗಳು ಭವಿಷ್ಯದ ಸಾಧನೆಗಳನ್ನು ರೂಪಿಸುತ್ತವೆ.ಶಿಕ್ಷಣವು ಕೇವಲ ಮಾಹಿತಿ ನೀಡುವುದಲ್ಲ ವ್ಯಕ್ತಿಯೊಳಗಿನ ಶಕ್ತಿಯನ್ನು ಜಾಗೃತಗೊಳಿಸುವುದು ಅದರ ನಿಜವಾದ ಕೆಲಸ ನೀವು ಭವಿಷ್ಯವನ್ನು ಬಯಸಿದರೆ ಮೊದಲಿಗೆ ಅದನ್ನು ಕನಸು ಕಾಣಬೇಕು. ಕನಸಿನಲ್ಲೇ ನಿಮ್ಮ ನಾಳೆಯ ನಕ್ಷೆ ಅಡಕವಾಗಿರುತ್ತದೆ. ಎಂದು ಅಬ್ದುಲ್ ಕಲಾಂ ರವರ ಮಾತುಗಳನ್ನು ನೆನಪಿಸಿ ಶಿಕ್ಷಣದ ಮಹತ್ವವನ್ನು ವಿವರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅದೇ ರೀತಿ ಇನ್ನೋರ್ವ ಅತಿಥಿ ವಂದನೀಯ ಗುರು ಡೊಮೆನಿಕ್ ಸಂತೋಷ್ ಸಿಕ್ವೇರಾ ರವರು ಮಾತನಾಡಿ (Byt 2) : ಪ್ರತಿ ವಿದ್ಯಾರ್ಥಿಗಳು ಕೂಡಾ ಒಂದೊಂದು ದೀಪ. ಆದರೆ ನಾವು ಎಲ್ಲ ದೀಪಗಳನ್ನು ಒಂದೇ ರೀತಿಯ ಗಾಜಿನೊಳಗೆ ಇಟ್ಟು, ಒಂದೇ ರೀತಿಯ ಬೆಳಕು ಬರಬೇಕೆಂದು ನಿರೀಕ್ಷಿಸುತ್ತಿದ್ದೇವೆ. ಇದು ಮಕ್ಕಳ ತಪ್ಪಲ್ಲ ವ್ಯವಸ್ಥೆಯ ಕಟ್ಟುಪಾಡಿನ ಸಮಸ್ಯೆ.ಇಂದಿನ ಕಾಲಕ್ಕೆ ಬೇಕಾಗಿರುವುದು ಮಾರ್ಕ್ಸ್ ಆಧಾರಿತ ಮೌಲ್ಯಮಾಪನವಲ್ಲ, ಸಾಮರ್ಥ್ಯ ಆಧಾರಿತ ಮಾರ್ಗದರ್ಶನ ಎಂದು ಹೇಳಿ ಬದಲಾಗಬೇಕಾದ ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿವರಿಸಿ ಸಮಾರಂಭಕ್ಕೆ ಶುಭ ಹಾರೈಸಿದರು.
ಅದೇ ರೀತಿ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮ್ಯಾನೇಜರ್ ವಂದನೀಯ ಗುರು ಎಡ್ವಿನ್ ಫ್ರಾನ್ಸಿಸ್ ಪಿಂಟೋ ರವರು ಮಾತನಾಡಿ (Bytes 3): ಜ್ಞಾನವನ್ನು ಪಡೆಯುವುದರಿಂದ ಮಾತ್ರ ಸಾಲದು; ಅದನ್ನು ನಡೆ-ನುಡಿಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.ಸತ್ಯವಂತಿಕೆ, ಕರ್ತವ್ಯನಿಷ್ಠೆ, ಇತರರ ಬಗ್ಗೆ ಕರುಣೆ, ಸಮಾಜಕ್ಕಾಗಿ ಮಾಡುವ ಸೇವೆ — ಇವು ವ್ಯಕ್ತಿತ್ವದ ಮೆಟ್ಟಿಲುಗಳು ಎಂದು ಹೇಳಿ ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಬಳಿಕ ನಡೆದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ನಾಟಕ, ಮಾಪ್ಪಿಳಪಾಟ್, ನಾಡ ಗೀತೆ ದೃಶ್ಯಾವಳಿಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಅಪಾರ ಪ್ರತಿಭೆಯನ್ನು ಪ್ರದರ್ಶಿಸಿದರು. ಶಿಕ್ಷಕರ ಮಾರ್ಗದರ್ಶನ, ವ್ಯವಸ್ಥಾಪಕರ ಸಹಕಾರ ಮತ್ತು ಪೋಷಕರ ನಿಸ್ವಾರ್ಥ ಬೆಂಬಲದಿಂದ ಈ ಕಾರ್ಯಕ್ರಮವು ಅತ್ಯಂತ ಯಶಸ್ಸನ್ನು ಕಂಡಿತು. ಎಲ್ಲರ ಸಹಕಾರದಿಂದ ವಾರ್ಷಿಕೋತ್ಸವವು ಸಂತೋಷ, ಉತ್ಸಾಹ ಹಾಗೂ ಹೆಮ್ಮೆಯಿಂದ ಕೂಡಿದ ಒಂದು ಅದ್ಬುತ ಆಚರಣೆಯಾಗಿ ಮೂಡಿ ಬಂತು.ಉಷಾಕಿರಣ್ ಸ್ವಾಗತಿಸಿ ಶಶಿಕಲಾ ವಂದಿಸಿದರು.