ಮಂಜೇಶ್ವರ: ಕೇರಳ ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಂಜೇಶ್ವರ ಗ್ರಾಮ ಪಂಚಾಯತ್‌ನಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಬಹುಮತವನ್ನು ಸಾಧಿಸಿದೆ. ಒಟ್ಟು 24 ಸ್ಥಾನಗಳ ಪೈಕಿ ಯುಡಿಎಫ್ 14 ಸ್ಥಾನಗಳನ್ನು ಗೆದ್ದು ಪಂಚಾಯತ್ ಮೇಲೆ ಹಿಡಿತ ಸಾಧಿಸಿದೆ.ಮಂಜೇಶ್ವರ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಸಮಾಜ ಸೇವಕ ಹಾಗೂ ಯುಡಿಎಫ್ ಅಭ್ಯರ್ಥಿ ಇಲ್ಯಾಸ್ ತೂಮಿನಾಡು ಅವರು ಅತ್ಯಧಿಕ ಬಹುಮತದಿಂದ ವಿಜಯ ಸಾಧಿಸಿದ್ದಾರೆ. ಚುನಾವಣಾ ಅವಧಿಯಲ್ಲಿ ಎದುರಾಳಿಗಳಿಂದ ನಡೆದ ಅಪಪ್ರಚಾರಗಳನ್ನೆಲ್ಲಾ ಜನತೆಯ ಸ್ಪಷ್ಟ ತೀರ್ಪಿನ ಮೂಲಕ ಮಣಿಸಿ ಅವರು ಗಮನಾರ್ಹ ಗೆಲುವು ದಾಖಲಿಸಿದ್ದಾರೆ.ಗೆಲುವಿನ ನಂತರ ಮಾತನಾಡಿದ ಇಲ್ಯಾಸ್ ತೂಮಿನಾಡು ಅವರು, “ಇದು ನನ್ನ ವೈಯಕ್ತಿಕ ಗೆಲುವಲ್ಲ. ಇದು ನನ್ನ ಗ್ರಾಮದ ಜನತೆಯ ಗೆಲುವು. ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಪ್ರತಿಯೊಬ್ಬ ನಾಗರಿಕನಿಗೂ ನಾನು ಸದಾ ಕೃತಜ್ಞನಾಗಿರುತ್ತೇನೆ” ಎಂದು ಹೇಳಿದರು.
ಗ್ರಾಮದ ಹಿರಿಯ ನಾಗರಿಕರು ಹಾಗೂ ಸ್ಥಳೀಯರು ಮಾತನಾಡಿ, ಜಾತಿ–ಮತ ಭೇದ ಮರೆತು ನಿಸ್ವಾರ್ಥ ಸಮಾಜಸೇವೆಯ ಮೂಲಕ ಜನರ ಮನ ಗೆದ್ದಿರುವುದೇ ಇಲ್ಯಾಸ್ ಅವರ ಈ ಗೆಲುವಿನ ಪ್ರಮುಖ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಭಿವೃದ್ಧಿ, ಪಾರದರ್ಶಕ ಆಡಳಿತ ಮತ್ತು ಜನಸೇವೆಯ ಮೇಲಿನ ಬದ್ಧತೆಯೇ ಈ ಫಲಿತಾಂಶಕ್ಕೆ ಕಾರಣವಾಗಿದೆ ಎಂದ ಅವರು ಇಲ್ಯಾಸ್ ತೂಮಿನಾಡಿನ ಪ್ರತಿಯೊಂದು ಮನೆಯ ಮಗನಾಗಿದ್ದಾನೆ ಎಂದು ಹೇಳಿದರು.
ಇಲ್ಯಾಸ್ ತೂಮಿನಾಡು ಅವರ ಈ ಭರ್ಜರಿ ಗೆಲುವು ಮಂಜೇಶ್ವರ ಗ್ರಾಮದಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ಅವರು ಶ್ರಮಿಸುವ ವಿಶ್ವಾಸವನ್ನು ಜನರು ವ್ಯಕ್ತಪಡಿಸಿದ್ದಾರೆ. ಬಿ ಜೆ ಪಿ 6 ಸ್ಥಾನಗಳನ್ನು ಪಡೆದುಕೊಂಡಿದ್ದು, ಎಸ್‌ಡಿಪಿಐ 2 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಇನ್ನು ಪಿಡಿಪಿ ಹಾಗೂ ಸ್ವತಂತ್ರ ಅಭ್ಯರ್ಥಿಗಳು ತಲಾ ಒಂದು ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಚುನಾವಣಾ ಫಲಿತಾಂಶದಿಂದ ಮಂಜೇಶ್ವರ ಗ್ರಾಮ ಪಂಚಾಯತ್‌ನಲ್ಲಿ ಯುಡಿಎಫ್ ಆಡಳಿತ ರಚಿಸುವ ಸಾಧ್ಯತೆ ಹೆಚ್ಚಾಗಿದೆ. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಯುಡಿಎಫ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರೆ, ಇತರ ಪಕ್ಷಗಳ ಕಾರ್ಯಕರ್ತರು ಮುಂದಿನ ರಾಜಕೀಯ ತಂತ್ರ ರೂಪಿಸುವಲ್ಲಿ ತೊಡಗಿದ್ದಾರೆ.ಸ್ಥಳೀಯ ಮಟ್ಟದ ಅಭಿವೃದ್ಧಿ, ಮೂಲಭೂತ ಸೌಕರ್ಯಗಳು ಹಾಗೂ ಜನಪರ ಯೋಜನೆಗಳ ಅನುಷ್ಠಾನಕ್ಕೆ ಹೊಸ ಆಡಳಿತ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಿರೀಕ್ಷೆಗಳು ಹೆಚ್ಚಿವೆ.