ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ ಕುಂಜತ್ತೂರು , ಅಂತರ್ ಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆ

ಮಂಜೇಶ್ವರ : ಅರಬಿಕ್ ದಿನಾಚರಣೆಯ ಪೂರ್ವಭಾವಿಯಾಗಿ ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ, ಕುಂಜತ್ತೂರು ಇವರ ಆಶ್ರಯದಲ್ಲಿ ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳಿಂದ ಅಂತರಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆಗಳು ವಿಜೃಂಭಿಸಿತು.

ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮವು ಅರಬಿಕ್ ದಿನಾಚರಣೆಯ ಭಾಗವಾಗಿ ಆಯೋಜಿಸಲ್ಪಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಕುರಾನ್ ಅಧ್ಯಯನ, ಅರಬಿಕ್ ಭಾಷೆ ಹಾಗೂ ಇಸ್ಲಾಮಿಕ್ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲರಾದ ಅಬ್ದುಲ್ ಖಾದರ್ ಉಧ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿರುವ ಧಾರ್ಮಿಕ ಜ್ಞಾನ, ಶಿಸ್ತಿನ ಅಭ್ಯಾಸ, ಭಾಷಾ ಸೌಂದರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಉತ್ಸಾಹದಿಂದ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಪ್ರಯತ್ನಗಳು ಭವಿಷ್ಯದಲ್ಲಿಯೂ ಮುಂದುವರಿದು, ವಿದ್ಯಾರ್ಥಿಗಳು ಜ್ಞಾನ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳಲ್ಲಿ ಉನ್ನತ ಸಾಧನೆ ಮಾಡುವಂತೆ ಪ್ರೇರಣೆಯಾಗಲಿ ಎಂದು ಹಾರೈಸಿದರು

ಕಾರ್ಯಕ್ರಮದ ಸಂದೇಶವಾಗಿ ನಿಮ್ಮಲ್ಲಿ ಶ್ರೇಷ್ಠರು ಕುರಾನ್ ಕಲಿಯುವವರೂ, ಅದನ್ನು ಬೋಧಿಸುವವರೂ ಆಗಿದ್ದಾರೆ ಎಂಬ ಪ್ರವಾದಿ ವಚನವನ್ನು ಸ್ಮರಿಸಲಾಯಿತು.ಕುರಾನ್ ಪಾರಾಯಣ ಸ್ಪರ್ಧೆಯಲ್ಲಿ ಹುಡುಗಿಯರ ವಿಭಾಗದಲ್ಲಿ ಮೊರತ್ತಣೆ ಎಂ ಎಸ್ ಗ್ಲೋಬಲ್ ಶಾಲಾ ವಿದ್ಯಾರ್ಥಿನಿ ಫಾತಿಮಾ ಸುರಯ್ಯ ಹಾಗೂ ಹುಡುಗರ ವಿಭಾಗದಲ್ಲಿ ಅದೇ ಶಾಲೆಯ ಮೊಹಮ್ಮದ್ ಫತೀನ್ ಮೊದಲ ಬಹುಮಾನಕ್ಕೆ ಅರ್ಹರಾಗಿದ್ದಾರೆ.ಕ್ಯಾಲಿಗ್ರಾಫಿ ಸ್ಪರ್ಧೆಯಲ್ಲಿ ಎಂ ಎಸ್ ಗ್ಲೋಬಲ್ ಶಾಲಾ ವಿದ್ಯಾರ್ಥಿನಿ ಸಬೀಹ ಕೌಸರ್ ಪ್ರಥಮ ಹಾಗೂ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯ ಹನ ಫಾತಿಮಾ ದ್ವೀತಿಯ ಬಹುಮಾನಕ್ಕೆ ಅರ್ಹರಾಗಿದ್ದಾರೆ.

ಅದೇ ರೀತಿ ಅಝಾನ್ ಸ್ಪರ್ಧೆಯಲ್ಲಿ ಕುಂಜತ್ತೂರು ಪೀಸ್ ಶಾಲೆಯ ಇಸ್ಮಾಯಿಲ್ ಆಹ್ಮದ್ ಶಬಲ್ ಮೊದಲ ಬಹುಮಾನ ಪಡೆದಿದ್ದಾರೆ.ಸ್ಪರ್ಧೆಗಳ ನಿರ್ಣಾಯಕರಾಗಿ ಪರಿಣತ ಉಲಮಾಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪಾಲಕರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.ಈ ರೀತಿಯ ಶಿಕ್ಷಣಾಧಾರಿತ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂಬುದಾಗಿ ಪೋಷಕರಿಂದ ಅಭಿಪ್ರಾಯ ಕೇಳಿ ಬಂತು.

SHARE
Loading spinner

Leave a Reply

Your email address will not be published. Required fields are marked *

error: Content is protected !!