ಬಂಟ್ವಾಳ: ಬೆಂಗಳೂರು ಫಕೀರ್ ಲೇಔಟ್ನಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬಡವರ ಮೇಲೆ ನಡೆಯುತ್ತಿರುವ ಬುಲ್ಡೋಜರ್ ರಾಜಕೀಯವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಇಂದು ಬಿ.ಸಿ.ರೋಡ್ ಕೈಕಂಬ ಜಂಕ್ಷನ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಾ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಡಿಜೆ ಹಾಕಿ ಕುಣಿಯುವ ಹಾಗೂ ಅಕ್ರಮ ಕೋಳಿ ಅಂಕ ನಡೆಸುವ ಸಂದರ್ಭಗಳಲ್ಲಿ ಅದನ್ನು ತಡೆಯಲು ಬಂದ ಪೋಲಿಸರ ಕಾಲರ್ಗೆ ಕೈ ಹಾಕಲು ಪ್ರಚೋದನೆ ನೀಡುವ ಶಾಸಕರು ಒಂದು ಕಡೆ ಇದ್ದರೆ, ಬಡವರು, ಬಾಣಂತಿಯರು ಹಾಗೂ ವೃದ್ಧರು ವಾಸಿಸುವ ಫಕೀರ್ ಕಾಲೋನಿಯಲ್ಲಿ ರಾತ್ರೋರಾತ್ರಿ ಬುಲ್ಡೋಜರ್ ಕಾರ್ಯಾಚರಣೆ ನಡೆಯುವಾಗ ಅದನ್ನು ತಡೆಯಲು ತಾಕತ್ತಿರುವ ಶಾಸಕರು ಇಲ್ಲದಿರುವುದು ಪ್ರಜಾಪ್ರಭುತ್ವದ ದುರಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಗೆ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ ಎಸ್.ಎಚ್ ನೇತೃತ್ವ ವಹಿಸಿದ್ದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಅಡ್ವೋಕೇಟ್ ಕಬೀರ್ ಕೆಮ್ಮಾರ ಅವರು ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದು, ಇದು ನ್ಯಾಯಾಲಯಕ್ಕೆ ಎಸಗಿದ ಗಂಭೀರ ಅಪಚಾರವಾಗಿದೆ ಎಂದು ಹೇಳಿದರು. ಬಡ ಮತ್ತು ದುರ್ಬಲ ವರ್ಗಗಳ ಮೇಲಿನ ಈ ರೀತಿಯ ದಮನಕಾರಿ ಕ್ರಮಗಳು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಅಧ್ಯಕ್ಷೀಯ ಭಾಷಣವನ್ನು ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ ಎಸ್.ಎಚ್ ಅವರು ಮಾಡಿದರು. ಅವರು, ನಿರಾಶ್ರಿತರ ಬದುಕಿನ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಕ್ರಮವನ್ನು ಎಸ್ಡಿಪಿಐ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಜೊತೆ ಕಾರ್ಯದರ್ಶಿ ಇರ್ಫಾನ್ ಕಾವಳಕಟ್ಟೆ ಸ್ವಾಗತಿಸಿ, ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ ಧನ್ಯವಾದ ಸಲ್ಲಿಸಿದರು.