ವಿವಾಹ ಭೋಜನ

ಆ ದಿನ ರಾಜುವಿಗೆ ಬಹಳ ಸಂಭ್ರಮವಿತ್ತು, ಅಪ್ಪ, ಅಮ್ಮ,ಅಕ್ಕ ತಮ್ಮರ ಜೊತೆ ಶ್ರೀಮಂತರ ಮನೆಯ ಮದುವೆಗೆ ಹೋಗುವುದಿತ್ತು. ತಮ್ಮ ಮನೆಯಲ್ಲಿ ಬಡತನವಿದ್ದುದರಿಂದ ಬಗೆ ಬಗೆಯ ತಿಂಡಿ ತಿನಿಸುಗಳು ತಿನ್ನಲು ಸಿಗುತ್ತಿರಲಿಲ್ಲ. ಅದು ಅಲ್ಲದೆ ಶ್ರೀಮಂತರ ಮನೆಯ ವೈಭವವನ್ನು ನೋಡುವ ತವಕ ಬೇರೆ. ಮದುವೆ ಮನೆಯಲ್ಲಿ ಅವನಂತೆ ಹಲವಾರು ಮಕ್ಕಳು ಬಂದಿದ್ದರು.
ಎಲ್ಲಾ ಮಕ್ಕಳಿಗೆ ಮೊದಲನೆಯದಾಗಿ ಅಚ್ಚರಿಯ ಸಂಗತಿ ಎಂದರೆ, ಮನೆಯ ಒಂದು ರೂಮಿನಲ್ಲಿ ಫ್ಯಾನ್ ತಿರುಗುತ್ತಿದ್ದುದು . ದೊಡ್ಡವರೆಲ್ಲ ಮದುವೆಯ ಗದ್ದಲದಲ್ಲಿದ್ದರೆ, ಮಕ್ಕಳು ಎಲ್ಲರೂ ಫ್ಯಾನ್ನ ಅಡಿಯಲ್ಲಿ ನಾನು ಅಲ್ಲಿ ನಾನು ಇಲ್ಲಿ ಎಂದು ಜಗಳವಾಡುತ್ತಿದ್ದರು. ಕೆಲವು ಮಕ್ಕಳು ಮಲಗಿಕೊಂಡು ಅದರ ಚಂದ ನೋಡುತ್ತಿದ್ದರು. ಒಬ್ಬ ಸ್ವಿಚ್ ಆಫ್ ಮಾಡಿದ ಆಗ ಅದರ ಮೂರು ರೆಕ್ಕೆಗಳು ಕಾಣಿಸುತ್ತಿದ್ದವು. ಅದೇ ಸ್ವಿಚ್ ಆನ್ ಮಾಡಿದರೆ, ಒಂದೇ ಒಂದು ರೆಕ್ಕೆ ಕಾಣದಂತೆ ಅದು ಸುಯ್ ಸುಯ್ ಎಂದು ತಿರುಗುತ್ತಿತ್ತು. ಶೆಕೆಯಾಗುತ್ತಿದ್ದ ಅವರಿಗೆ ಅದು ತಂಪು ಕೊಡುತ್ತಿತ್ತು. ಹೀಗೆ ಎಲ್ಲರೂ ಫ್ಯಾನ್ನ ಬಗ್ಗೆ ವಿಮರ್ಶೆ ಮಾಡುತ್ತಿರುವಾಗ, ರಾಜುಗೆ ಮನೆಯ ಬೇರೆ ವಸ್ತುಗಳನ್ನು ನೋಡುವ ಬಯಕೆಯಾಯಿತು.


ಅವನು ಮಕ್ಕಳ ಮಂದೆಯಿಂದ ತಪ್ಪಿಸಿ ಮೆಲ್ಲನೆ ಬೇರೆ ಕಡೆಗೆ ಹೋದ. ಮುಂದೆ ಹೋದಾಗ ಅವನಿಗೆ ದೇವರಕೋಣೆ ಕಾಣಿಸಿತು. ಅಲ್ಲಿ ಪೂಜೆ ಸಾಮಗ್ರಿಗಳ ನಡುವೆ ಇಟ್ಟಿದ್ದ ಒಂದು ಚೆಂದವಾದ ಬಾಟಲಿಯ ಮೇಲೆ ಅವನ ಕಣ್ಣು ಬಿತ್ತು. ನೋಡುವಾಗ ಎಣ್ಣೆ ಬಾಟಲಿಯಂತೆ ಇತ್ತು.
“ಎಂಥ ಸುಂದರವಾದ ಎಣ್ಣೆ ಬಾಟಲಿ ಇದು, ನಮ್ಮ ಮನೆಯಲ್ಲಿ ಇಂತಹದ್ದನ್ನು ನೋಡೇ ಇಲ್ಲವಲ್ಲ” ಎಂದು ಮನಸ್ಸಿನಲ್ಲಿ ಅಂದುಕೊಂಡ. ಕೈಯಲ್ಲಿ ಹಿಡಿದು ಚಂದ ನೋಡಿದ, ಆ ಕಡೆ ಈ ಕಡೆ ತಿರುಗಿಸುವಾಗ ಎಣ್ಣೆಯಂತೆ ಚಲಿಸಿತು. ಮುಚ್ಚಲ ತೆಗೆದು ನೋಡಿದ “ಆಹಾ! ಎಂಥ ಸುಗಂಧ!! ನಮ್ಮ ಮನೆಯಲ್ಲಿ ಇಂತಹ ಎಣ್ಣೆ ಇದ್ದಿದ್ದರೆ ಏನು ಚೆನ್ನಾಗಿರುತ್ತಿತ್ತು” ಅಂದುಕೊಳ್ಳುತ್ತಲೇ ಕೈಗೆ ಸ್ವಲ್ಪ ಹಾಕಿಕೊಂಡು. ಸೂಪರ್ ಆಗಿತ್ತು ಪರಿಮಳ, ತಲೆಗೂ ಹಚ್ಚಿಕೊಂಡರೆ ಒಳ್ಳೆಯದಲ್ಲವೇ ಎಂದು ಸ್ವಲ್ಪ ತಲೆಗೂ ಹಚ್ಚಿಕೊಂಡ. ಸುಗಂಧ ಎಲ್ಲಾ ಕಡೆ ಹಬ್ಬಲು ಶುರುವಾಯಿತು, ಬಾಟಲಿಯನ್ನು ಮೆಲ್ಲ ಅಲ್ಲೇ ಇಟ್ಟು ಹೊರಗೆ ಬಂದ.
ಇನ್ನೂ ಫ್ಯಾನ್ ನ ವಿಚಾರ ಮುಗಿಯದೇ ಇದ್ದ ಮಕ್ಕಳ ಎದುರಿಗೆ ಬಂದಾಗ, “ಏನೋ ನೀನು ಇಷ್ಟೊಂದು ಪರಿಮಳ ಬರುತ್ತಿದ್ದಿ” ಎಂದ ತಮ್ಮ ರಾಮು. ಫ್ಯಾನಿನ ವಿಚಾರ ಬಿಟ್ಟು ಎಲ್ಲರೂ ಕೂತಲ್ಲಿಂದ, ಮಲಗಿದ್ದಲ್ಲಿಂದ ಎದ್ದು ಓಡಿ ಬಂದರು.


“ಅಲ್ಲ ಆಗ ಇಲ್ಲದ ಪರಿಮಳ ಈಗ ಎಲ್ಲಿಂದ ಬರಬೇಕು?” ಎಂದು ಎಲ್ಲರೂ ವಿಚಾರಿಸಲು,
“ಅದೂ.. ನಾನಲ್ಲಿರುವ ಎಣ್ಣೆಯನ್ನು ಹಚ್ಚಿಕೊಂಡೆ, ನೀವು ಬೇಕಾದರೂ ನೋಡಿ ಎಷ್ಟು ಸುಗಂಧಭರಿತ ಎಣ್ಣೆ ಅದು ಅಂತ” ಎಂದು ಅದರ ಬಗ್ಗೆ ವಿವರಿಸಲು ಹೊರಟ ರಾಜು. ಓಡೋಡಿ ಬಂದು ಎಲ್ಲರೂ ನೋಡಬೇಕಾದರೆ ತಿಳಿಯಿತು ಅದು ಎಣ್ಣೆಯಲ್ಲ, ಸುಗಂಧ ದ್ರವ್ಯದ ಬಾಟಲಿಯಾಗಿತ್ತು . ಎಲ್ಲಾ ಮಕ್ಕಳು ರಾಜುವನ್ನು ಕೈತಟ್ಟಿ ನಗಾಡಲು ಆರಂಭಿಸಿದರೆ, ಅವನು ಅಲ್ಲಿಂದ ಓಡಿ ಹೋದ. ದೊಡ್ಡವರ ಮಧ್ಯ ಕೂತರೂ ಸುಗಂಧದ್ರವ್ಯದ ಘಾಟು ದೂರವಾದೀತೇ?! ಎಲ್ಲರ ಮೂಗಿಗೂ ಅದು ತಟ್ಟಿತು. ಎಲ್ಲರೂ ಅವನಿಗೆ ಅವಹೇಳನ ಮಾಡಿದರು.
ರಾಜುವಿಗೂ ಅದರ ಘಾಟಿನಿಂದ ತಲೆನೋವು ಶುರುವಾಯಿತು. ಊಟ ಮಾಡಲು ಬಗೆ ಬಗೆಯ ಪದಾರ್ಥಗಳು ಇದ್ದರೂ ಕಲಸಿ ತುತ್ತು ತೆಗೆದುಕೊಂಡರೆ ವಾಸನೆ ಎಲ್ಲದರದ್ದೂ ಸುಗಂಧದ್ರವ್ಯದ್ದಾಗಿ ಬಿಟ್ಟಿತು .ಊಟ ಮಾಡಲೂ ಸೇರದೇ ಹೋಯಿತು. ಮೃಷ್ಟಾನ್ನ ಭೋಜನದ ಆಸೆಗೇ ಅಲ್ಲಿಗೆ ಹೋಗಿದ್ದಾಗಿತ್ತು. ಅದೂ ಆಗದೇ ಅವನು ಬೇಸತ್ತು ಸೋತು ಹೋದ.
ಎಲ್ಲಾ ಮುಗಿಸಿ ಮನೆಗೆ ಬರಬೇಕಾದರೆ, ದಾರಿಯುದ್ದಕ್ಕೂ “ನಿನಗೆ ಅಧಿಕಪ್ರಸಂಗ, ಮಾನ ಮರ್ಯಾದೆ ಕಳೆಯಲೆಂದೇ ನೀನು ನಮ್ಮ ಜೊತೆ ಬಂದಿದ್ದೀಯಾ” ಎಂದು ಬಯ್ಯುತ್ತಾ ಬಡಿಯುತ್ತಾ ಬಂದರು ಅಪ್ಪ-ಅಮ್ಮ ಇಬ್ಬರೂ. ಎಷ್ಟು ಬೈದ್ದರೋ,ಎಷ್ಟು ಏಟು ಹೊಡೆದರೋ ತಿಳಿಯದು. ಅಳುತ್ತಾ ಅಳುತ್ತಾ ಮನೆಗೆ ತಲುಪಿದರೆ, ಮನೆಯಲ್ಲಿ ಹಿರಿಯರಿದ್ದಾರಲ್ಲವೆ?! ಅಜ್ಜ ಅಜ್ಜಿ. ಅವರಿಂದಲೂ ಅದೇ ರೀತಿ ಒದೆ ತಿನ್ನಬೇಕಾಯಿತು.
ಮಕ್ಕಳ ಮನಸ್ಸು ಯಾವಾಗಲೂ ಕುತೂಹಲಕಾರಿಯಾಗಿರುತ್ತದೆ. ಮೇಲೆ ಹೇಳಿದ ಘಟನೆಯ 70 ರ ದಶಕವೇ ಇರಲಿ,ಇಂದಿನ ಕಾಲವೇ ಇರಲಿ, ಮನಸ್ಸಿನ ಜಿಜ್ಞಾಸೆಗಳೆಲ್ಲಾ ಸಮಾನ . ವ್ಯತ್ಯಾಸ ಒಂದೇ experiment ನ ವಸ್ತುಗಳು ಮಾತ್ರ ಬೇರೆ ಬೇರೆಯಷ್ಟೇ.

✍️ಬರಹ : ಭಾರತೀ ನೀರ್ಪಾಜೆ ಹೌಸ್

SHARE
Loading spinner

Leave a Reply

Your email address will not be published. Required fields are marked *

error: Content is protected !!