ಅಶ್ವಮೇಧಾ

ಊರಲ್ಲಿ ನಾನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕೆಂದರೆ ಸ್ಕೂಟರಲ್ಲಿ ಹೋಗುತ್ತೇನೆ. ಒಂದು ಕಾಲವಿತ್ತು, ನಾವು ಎಲ್ಲಿಂದ ಎಲ್ಲಿಗೆ ಹೋಗಬೇಕಾದರೂ ಬಸ್ಸು ಹೋಗುವ ಮಾರ್ಗದವರಿಗೆ ನಡೆದುಕೊಂಡು ಹೋಗಿ ಆಮೇಲೆ ಬಸ್ ಹತ್ತಿ ಹೋಗಬೇಕಿತ್ತು. ಬಸ್ಸು ತಪ್ಪಿ ಹೋದರಂತೂ ಗಂಟೆ ಗಂಟೆ ಬಸ್ಟ್ಯಾಂಡಿನಲ್ಲಿ ನಿಂತು ಕಾಯಬೇಕಾಗಿತ್ತು. ಈಗ ಒಂದು ಹತ್ತು ವರ್ಷದ ಹಿಂದೆ ಸ್ಕೂಟರ್ ತಗೊಂಡ ಮೇಲೆ ಬಸ್ ಹತ್ತಿದ ನೆನಪೇ ಇಲ್ಲ. ಇದೇ ವೇಳೆಗೆ ಸಿದ್ದರಾಮಯ್ಯನ ಸರಕಾರವು ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿತು. ಈಗ ಸ್ಕೂಟರ್ ನಲ್ಲಿ ಓಡಾಡಿದ ನಂತರ, ಬಸ್ಸಿಗೆ ಕಾಯುವುದು, ಸೀಟ್ ಇಲ್ಲಂದ್ರೆ ರಶ್ನಲ್ಲಿ ನಿಂತು ಪ್ರಯಾಣ ಮಾಡುವುದು ಕಿರಿಕಿರಿಯನ್ನು ಅನಿಸತೊಡಗಿದೆ. ಉಚಿತ ಪ್ರಯಾಣದ ಅವಕಾಶ ಪಡೆಯುವುದು ಕೈ ತಪ್ಪಿ ಹೋಯಿತಲ್ಲ ಎಂದು ಬೇಸರಿಸುತ್ತಿದ್ದೆ. ಏನೇ ಇರಲಿ ಉಚಿತ ಪ್ರಯಾಣವನ್ನು ಒಮ್ಮೆಯಾದರೂ ಅನುಭವಿಸಬೇಕೆಂದು ತೀರ್ಮಾನಿಸಿದೆ.
ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಒಂದು ಚಿಕ್ಕ ರೂಮನ್ನು ಬಾಡಿಗೆ ಪಡೆದುಕೊಂಡಿದ್ದ. ಇದೇ ಅವಕಾಶವೆಂದುಕೊಂಡು, ಬೆಂಗಳೂರಿಗೆ ಉಚಿತ ಬಸ್ ಪ್ರಯಾಣ ಮಾಡುವುದೆಂದು ನಿರ್ಧಾರ ಮಾಡಿದೆ. ತಯಾರಿ ಮಾಡಬೇಕಲ್ಲ……., ಒಂದು ದಿನ ಬಸ್ ಬಗ್ಗೆ ತಿಳಿಯಲು ಬಸ್ ಸ್ಟ್ಯಾಂಡಿಗೆ ಹೋದೆ. ಬೆಳಿಗ್ಗೆ ಹೊತ್ತು ಎಷ್ಟು ಗಂಟೆಗೆಲ್ಲ ಬಸ್ಸು ಹೊರಡುವುದೆಂದು ವಿಚಾರಿಸಿದೆ. ಅವನು ಬೆಳಿಗ್ಗೆ 7:00 ಯಿಂದ ಹಿಡಿದು 10. 30 ಗಂಟೆಯವರೆಗೆ ಹೊರಡುವ ಬಸ್ಸುಗಳ ವಿವರ ನೀಡಿದ. 10. 15 ಗಂಟೆಗೆ ಹೊರಡುವ ಬಸ್ಸಿಗೆ ನಾನು ತರಳುವೆನೆಂದು ಮನಸ್ಸಿನಲ್ಲಿ ಅಂದುಕೊಂಡೆ.


ಗಂಡ ಇದ್ದಿದ್ದರೆ ನನ್ನ ಈ ಚಿಲ್ಲರೆ ಶೋಕಿಗೆ ಸೊಪ್ಪು ಹಾಕುತ್ತಿರಲಿಲ್ಲ. ಈಗ ನನ್ನದೇ ಕಾರುಬಾರು ನೋಡಿ. ಬೇಡ ಮಗಳೇ ಇದು ಕಷ್ಟ ಎಂದರು ಅಮ್ಮ. ಹೆಚ್ಚಿಗೆ ಹೇಳಲು ಮದುವೆಯಾದ ಮಕ್ಕಳ ಮೇಲೆ ಅಷ್ಟೊಂದು ಹಿಡಿತವಿಲ್ಲವಲ್ಲ, ಅಲ್ಲದೆ ನಮ್ಮ ಮಕ್ಕಳೇ ಬೆಳೆದು ದೊಡ್ಡವರಾಗಿದ್ದಾರೆ. ಹಾಗಾಗಿ ಹೆಚ್ಚಿಗೆ ಹೇಳಲಿಲ್ಲ ಸುಮ್ಮನಾದರು. ಮಗ ಎಂದ ನಾನೇ ಟಿಕೆಟ್ ಬುಕ್ ಮಾಡುತ್ತೇನೆ ಅದರಲ್ಲಿ ಬಂದುಬಿಡು ಎಂದು. ನಾನು ನನ್ನ ಉಚಿತ ಬಸ್ಸಿನ ವಾದವನ್ನು ಅವನ ಮುಂದೆ ಇಟ್ಟೆ. ಹಿರಿಯರಿಗೆ ಹೆಚ್ಚಿಗೆ ಏನು ಹೇಳುವುದು ಎಂದು ಅವನು ಸುಮ್ಮನಾದ.
ಬೆಂಗಳೂರು ತಲುಪಿದಾಗ ಬಸ್ಟ್ಯಾಂಡಿ ನಿಂದ ನನ್ನನ್ನು ರೂಮಿಗೆ ಕರೆದುಕೊಂಡು ಬರಬೇಕಲ್ಲವೇ ಅದಕ್ಕೆ ಶನಿವಾರ ದಿನ ಬಂದರೆ ಒಳ್ಳೆಯದು ಮಗ ಪುರುಸೊತ್ತಿನಲ್ಲಿರುತ್ತಾನೆ ಎಂದು ಶನಿವಾರದ ದಿನ ನಾನು ಹೊರಟೆ.ಹೋಗುವಾಗ ಸುಮ್ಮನೆ ಹೋಗಲಾಗುತ್ತದೆಯೇ, ಊರಿನಿಂದ ಅಕ್ಕಿ, ತೆಂಗಿನಕಾಯಿ, ಮನೆಯಲ್ಲಿ ಮಾಡಿದ ತಿಂಡಿ, ತರಕಾರಿ ಎಲ್ಲಾ ತಗೊಳ್ಳದೇ ಹೋಗುವುದು ನಮಗೇ ಅವಮಾನದಂತೆ. ಏಕೆಂದರೆ ನಮ್ಮ ತೋಟದಲ್ಲಿ ಬೆಳೆದದ್ದು ನಮ್ಮ ಮಕ್ಕಳಿಗಲ್ಲದೆ ಬೇರೆ ಯಾರಿಗೆ? ಅನ್ನೋ ಪ್ರಶ್ನೆ ಬರುತ್ತದೆ.


ಬೆಳಗಿನ ಜಾವ ಅಥವಾ ರಾತ್ರಿಯ ವೇಳೆ ಆದರೆ ನಮ್ಮ ಸಂಬಂಧಿಕರು ಬಸ್ ಸ್ಟ್ಯಾಂಡಿಗೆ ಬಿಡುತ್ತಿದ್ದರು. ಉಳಿದ ಹೊತ್ತಿನಲ್ಲಿ ಅವರಿಗೂ ಅವರ ಕೆಲಸವಿಲ್ಲವೇ…..? ಹಾಗೆ ನಾನು ನನ್ನ ಲಗೇಜ್ ನೊಂದಿಗೆ ಬರಬೇಕೆಂದರೆ ರಿಕ್ಷಾ ಮಾಡಿಕೊಂಡು ಬರಬೇಕು. ಅರ್ಧ ಗಂಟೆ ಮುಂಚಿತವಾಗಿ ಬಾ ಎಂದು ರಿಕ್ಷಾದವನಿಗೆ ಹೇಳಿದೆ. ಅವನು ಇನ್ನೂ ಕಾಲು ಗಂಟೆ ಬೇಗ ಬಂದ. ಅಂತೂ 10. 15ಕ್ಕೆ ಹೊರಡುವ ಬಸ್ಸಿಗೆ 9.40ಕ್ಕೆ ನಾನು ಬಸ್ಟ್ಯಾಂಡಿಗೆ ತಲುಪಿದೆ,ಹೆಚ್ಚು ಕಮ್ಮಿ 40 ನಿಮಿಷ ಬೇಗ. ಬ್ಯಾಗಗಳನ್ನೆಲ್ಲ ಒಂದು ಕಡೆ ಇಟ್ಟು ಬಸ್ ಎಷ್ಟು ಗಂಟೆಗೆ ಬರುವುದು ಎಂದು ಕೇಳಿ ಬಿಡುವ ಅಂತ ವಿಚಾರಣೆ ಮಾಡಲು ಹೋದಾಗ, ಮೊನ್ನೆ ಕೇಳಿದ್ದ ವ್ಯಕ್ತಿಯೇ ಇದ್ದ, ಈಗ ಅವನ ಮಾತೇ ಬೇರೆಯಾಗಿತ್ತು. 10.15 ಕ್ಕೆ ಹೋರಾಡಬೇಕಾದ ಬಸ್ಸು ಬರುವುದು ತಡವಾಗುತ್ತೆ, ಅದು ಯಾವಾಗಲೂ ಲೇಟು 10.30 ಮುಕ್ಕಾಲಾಗಬಹುದು, ನೀವು ಈಗ ಬರುವ ಮೈಸೂರು ಬಸ್ಸಿಗೆ ಹತ್ತಿ ಹೋಗಿ, ಅದು ಖಾಲಿ ಇದೆ, ಆರಾಮದಲ್ಲಿ ಹೋಗಬಹುದು ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಬಸ್ಸು ಬೇಕಾದಷ್ಟು ಸಿಗುತ್ತೆ ಅದರಲ್ಲಿ ಹೋಗಿ ಅಲ್ಲ ಎಂದ
ಅವನು ಹೇಳಿದಂತೆ ಹೋಗಲು, ಎರಡೆರಡು ಬಸ್ ಬದಲಾಯಿಸಿ ಕೊಂಡು ಹೋಗಲು ನನಗಾಗದು. ಏಕೆಂದರೆ ನನ್ನ ಕೈಯಲ್ಲಿ ಅಷ್ಟೊಂದು ಲಗೇಜುಗಳಿದ್ದವು. ಅದನ್ನು ಹಿಡಕೊಂಡು ಇಳಿಯುವುದು ಹತ್ತುವುದು ಕಷ್ಟ ಸಾಧ್ಯ. ಒಂದೇ ಬಸ್ಸಿನಲ್ಲಿ ಇಲ್ಲಿ ಹತ್ತಿ ಕೂತರೆ ಬೆಂಗಳೂರಿನಲ್ಲಿ ಇಳಿಸಲು ಮಗ ಬರುತ್ತಾನೆ, ಆಗ ಯಾವುದೇ ಚಿಂತೆ ಇಲ್ಲ, ಹಾಗಾಗಿ ನಾನು ಲೇಟಾದರೂ ಪರವಾಗಿಲ್ಲ ಎಂದು ಕಾದೆ. ಕಾದೆ….. ಕಾದೆ….. 10. 15, 10:30 ಆಯ್ತು 10. 45, 11 ಆಯ್ತು ಅಬ್ಬಬ್ಬಾ ಅಷ್ಟೊತ್ತಿಗೆ ಒಂದು ಬಸ್ ಬಂತು. ಹೇಗಾದರೂ ಲಗೇಜ್ ಎಲ್ಲ ಎಳ್ಕೊಂಡು ಹೋಗಿ ಸೀಟ್ ಮಾಡಿಕೊಂಡು ಕೂತೆ, ಸ್ವಲ್ಪ ಹೊತ್ತಿನಲ್ಲಿ ಕಂಡಕ್ಟರು ಈ ಬಸ್ ಹೊರಡುವುದಿಲ್ಲ ಅಲ್ಲಿ ಹತ್ತಿರದಲ್ಲಿರುವ ಮಡಿಕೇರಿ ಬಸ್ಸಿಗೆ ಎಲ್ಲರೂ ಹತ್ತಿರಿ ಎಂದ. ಎಲ್ಲರೂ ಇಳಿದು ಓಡಿ ಹೋಗಿ ಹತ್ತಿದರು, ನನಗೆ ಲಗ್ಗೆಜನ್ನು ಎತ್ತಿಕೊಂಡು ನನ್ನ ಕೈಯಲ್ಲಿ ಸಾಧ್ಯವೇ….. ಅಯ್ಯೋ ಎಂದುಕೊಳ್ಳುತ್ತಾ ಡ್ರೈವರ್ತ್ರ ಕೇಳಿದೆ ಆ ಬಸ್ ಏನು ಬೆಂಗಳೂರಿಗೆ ಹೋಗುತ್ತಾ?
ನೀವು ಬೆಂಗಳೂರಿಗೆ ಟಿಕೆಟ್ ತೆಗೆದಿದ್ದೀರಾ ಹಾಗಾದ್ರೆ ಕೂತಿರಿ ಅಂದ


ಹೋದ ಜೀವ ಬಂದ ಹಾಗಾಯ್ತು, ಅಲ್ಲೇ ಒಂದು ಲೇಡೀಸ್ ಸೀಟಿನಲ್ಲಿ ಕೂತೆ. ಈಗ ಬಸ್ಸಿನಲ್ಲಿ ಯಾರೂ ಇಲ್ಲ ನಾನೊಬ್ಬಳೇ ಕೂತಿದ್ದೆ, ಅಷ್ಟೊತ್ತಿಗೆ ಒಬ್ಬ ಮಹಿಳೆ ಬೆಂಗಳೂರಿಗೆ ಹೋಗುವವರು ಬಂದರು. ಒಬ್ಬೊಬ್ಬರಾಗಿ ಇಪ್ಪತ್ತು ಜನ ಬಸ್ಸನ್ನೇರಿದರು. ಅಂತೂ ಇಂತೂ 11. 20 ಕ್ಕೆ ಬಸ್ಸು ಹೊರಟಿತು. ಕಂಡಕ್ಟರ್ ಟಿಕೆಟ್ ಕೊಡಲು ಬಂದ, ನಾನು ಬೆಂಗಳೂರು ಅಂತ ಹೇಳಿದಾಗ ಬೆಂಗಳೂರೆಲ್ಲಾ ಹೋಗಲಮ್ಮ ಬಸ್ಸಿನಲ್ಲಿ ಏನೋ ಪ್ರಾಬ್ಲಮ್ ಇದೆ ನೀವು ಮಡಿಕೇರಿಗೆ ಟಿಕೆಟ್ ತೆಗೆಯಿರಿ ಮುಂದೆ ಹೋಗುವುದಾದರೆ ಆಮೇಲೆ ಟಿಕೆಟ್ ಕೊಡುತ್ತೇನೆ ಎಂದ. ಇದು ದೊಡ್ಡ ಪೇಚಿಗೆ ಸಿಕ್ಕಂತೆ ಆಯ್ತು. ಇದರ ನಡುವಲ್ಲಿ ಬಸ್ಸು ಹೊರಟಿತಾ ಎಂದು ನಮ್ಮ ಶುಭ ಚಿಂತಕರ ಮೂರು ನಾಲ್ಕು ಫೋನ್ ಕರೆ ಬಂತು. ಮಗನದ್ದು ಆಗಿದ್ದಾಗೆ ಕರೆ ಬರುತ್ತಾ ಇತ್ತು .
ಅಂತೂ ಇಂತೂ 2 ಗಂಟೆಗೆ ಮಡಿಕೇರಿ ತಲುಪಿತು, ಇನ್ನೇನು ಮಾಡಬೇಕು ಎಂದು ಯೋಚಿಸುತ್ತಿರುವಾಗ.. ಇದೇ ಬಸ್ ಬೆಂಗಳೂರಿಗೆ ಹೋಗುತ್ತೆ ಎಂದ ಕಂಡಕ್ಟರ್. ಅಬ್ಬಾ ಈಗ ಮನಸ್ಸು ಹಗುರಯಿತು, ಮಗನಿಗೆ ಕೂಡಲೇ ಕಾಲ್ ಮಾಡಿ ಹೇಳಿದಾಗ ಅವನ ಪ್ರತಿಕ್ರಿಯೆ ಬೇರೆಯೇ..! ಇಷ್ಟೆಲ್ಲಾ ತಲೆಬಿಸಿ, ಟೆನ್ಶನ್ ಮಾಡದಿರಲೆಂದೇ ಅಲ್ಲವೇ ನಾವು ದುಡ್ಡು ಕೊಟ್ಟು ಮೊದಲೇ ಬುಕ್ ಮಾಡುದು, ನಿಶ್ಚಿoತೆಯಿಂದ ಪ್ರಯಾಣಿಸಲಲ್ಲವೇ?….
ಪ್ರಯಾಣ ಸಾಗಿತ್ತು ಮುಂದೆ ಮೈಸೂರು, (ಅಲ್ಲಿ ಆ ದಿನ ಸಿಕ್ಕಾಪಟ್ಟೆ ಟ್ರಾಫಿಕ್ ) ಮಂಡ್ಯ ಹೀಗೆ….., ಎಕ್ಸ್ಪ್ರೆಸ್ ಹೈ ವೇ ಇದ್ದರೂ ಈ ಬಸ್ಗಳಿಗೆ ಅದರಲ್ಲಿ ಹೋಗುವ ಅವಕಾಶವಿಲ್ಲ. ಗಡ ಗಡ ಅನ್ನುತ್ತಾ, ಬೆಗಳೂರು ಸೇರಲು ರಾತ್ರಿ 9 ಆಗಿತ್ತು. ಇಳಿದ ಮೇಲೂ ನನ್ನ ಮೇಲಿನ ಸವಾರಿ ಮುಗಿಲಿಲ್ಲಾ….. ಇಂತಾ ಒಂದು ಮಾನಸಿಕ ತುಮುಲದ, ಎಲ್ಲರಿಂದಲೂ ಬೈಸಿಕೊಳ್ಳುವ ಯಾತ್ರೆ ನಿಮ್ಮದಾಗಬೇಕೇ ಆಯ್ದುಕೊಳ್ಳಿ ಅಶ್ವಮೇಧಾ

✍️ಬರಹ : ಭಾರತೀ ನೀರ್ಪಾಜೆ ಹೌಸ್

SHARE
Loading spinner

Leave a Reply

Your email address will not be published. Required fields are marked *

error: Content is protected !!