ಕೈಯ ತುತ್ತು ಯಾರ ಬಾಯಿಗೆ?

ರಾತ್ರಿ ಸುಮಾರು ಎಂಟು ಗಂಟೆ ಆಗಿರಬಹುದು, ವಿಜಯ್ ನ ಮನೆಯಲ್ಲಿ ಊಟಕ್ಕೆ ತಯಾರಿ ನಡೆಯುತ್ತಿತ್ತು. ಮಡದಿ ಪೂಜಾ ಊಟಕ್ಕೆ ಬನ್ನಿ ಎಂದು ಕರೆದಾಗ, ವಿಜಯ್. “ ಆ, ಸ್ವಲ್ಪವೇ ಅಡಿಕೆ ಇದೆ ಅದನ್ನು ಸುಲಿದು ಮುಗಿಸಿ ಬರುತ್ತೇನೆ. ಮಗನನ್ನು ಕರೆ” ಎಂದ. ವಿಜಯನ ಅಮ್ಮ ಆಗಷ್ಟೇ ದೇವರ ನಾಮ ಹೇಳಿ ಮುಗಿಸಿ, ಓದುತ್ತಿದ್ದ ಮೊಮ್ಮಗನನ್ನು ಕರೆದು ಬಂದರು. ತಾನು ಬೆಳೆದ ಅಡಿಕೆ, ಸುಲಿಯಲು ಹಾಕಿದ್ದಷ್ಟನ್ನು ಮುಗಿಸಿ, ಕೈಕಾಲು ತೊಳೆದು ಇನ್ನೇನು ಒಳಗೆ ಬರುವಷ್ಟರಲ್ಲಿ, ಅವನ ಗೆಳೆಯ ಗುರು, ತನ್ನ ಜೊತೆಗೆ ಸಿದ್ದಾರ್ಥ ಎಂಬುವವರನ್ನು ಕರೆದುಕೊಂಡು ಬಂದಿದ್ದ . ಮಾಮೂಲಿನಂತೆ ಉಭಯ ಕುಶಲೊಪರಿ ವಿಚಾರಿಸಿದ ನಂತರ ಅವರು ಹೇಳಿದ ವಿಷಯದಿಂದ ಮನೆಯವರಿಗೆ ಆಕಾಶದಲ್ಲಿ ತೇಲುವಷ್ಟು ಸಂತೋಷವಾಯಿತು .


ಗುರುವಿನ ಪ್ರಸ್ತಾವನೆ ಏನಾಗಿತ್ತೆoದರೆ, “ನಿಮ್ಮ ಪಿತ್ರಾರ್ಜಿತ ಜಾಗ ಸುಮಾರು 4:30 ಎಕರೆ ಆಗುವಷ್ಟು ಗುಡ್ಡ, ನಿಮ್ಮ ಜಮೀನಿಗಿಂತ ಸ್ವಲ್ಪ ದೂರದಲ್ಲಿ ಇದೆಯಲ್ಲವೇ . ಅದನ್ನು ಸಿದ್ದಾರ್ಥ ಕೊಂಡುಕೊಳ್ಳಲು ಬಯಸುತ್ತಾರೆ. ಅವರಿಗೆ ಜಾಗದ ಅಗತ್ಯವಿದೆ ಹಾಗೂ ಚಾಲ್ತಿಯಲ್ಲಿರುವ ಬೆಲೆಯನ್ನು ಕೊಡಲು ಅವರು ತಯಾರಿದ್ದಾರೆ ” ಎಂದಾಗಿತ್ತು. ವಿಷಯ ಕೇಳಿದ ಕೂಡಲೇ ಮನೆಯವರಿಗೆಲ್ಲಾ ರೋಮಾಂಚನವಾಯಿತು. ಆ ಬಂಜರು ಭೂಮಿಗೆ ಲಕ್ಷಗಟ್ಟಲೆ ಯಾರಾದರೂ ಕೊಡುತ್ತಾರೆ ಎಂದರೆ, ಬೇಡ ಎನ್ನುವುದುಂಟೇ?!! ಬರಗಾಲದಲ್ಲಿ ಬಂದ ಮಳೆಯಂತೆ ಅವರು ಮನೆಗೆ ಬಂದಿದ್ದರು, ಮನೆಯಲ್ಲಿ ಎಲ್ಲರ ಮನಸು ಚಿಗುರಿತು.
ವಿಜಯ್ ಹೇಳಿದ “ ಆ ದೇವರು ಈಗ ಕಣ್ಣೊಡೆದಿದ್ದಾನೆ, ಹಾ…! ದುಡ್ಡು ಬಂದರೆ, ಸ್ವಲ್ಪ ನಮ್ಮ ಉಳಿತಾಯ ಖಾತೆಯಲ್ಲಿಟ್ಟು, ಉಳಿದ ದುಡ್ಡಿನಿಂದ ತೋಟ ಹಾಗೂ ಮನೆಯನ್ನು ಚಂದ ಮಾಡೋಣ” ಎಂದು. ಪೂಜಾ ತನ್ನಿಚ್ಛೆ ಯನ್ನು ಹೇಳಿದಳು, “ ಪುಟ್ಟದಾದ ಬೇರೆಯೇ ಮನೆ ಕಟ್ಟೋಣ ಹಾಗೂ ಒಡವೆ ಮತ್ತು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸೋಣ”


ವಯಸ್ಸಾದರೂ ಅಮ್ಮನಿಗೆ ಆಸೆಗಳಿಲ್ಲವೇ? “ ನಾನು ಪುಣ್ಯಕ್ಷೇತ್ರಗಳಿಗೆ ಪ್ರವಾಸ ಮಾಡಬೇಕು, ನನಗೂ ಬೇಕು ಬೇಡಗಳಿಗೆ ವ್ಯಯಿಸಲು ನನ್ನ ಹೆಸರಿನಲ್ಲಿ ಸ್ವಲ್ಪವಾದರೂ ಹಣ ಇಡಬೇಕು” ಎಂದರೆ, ಹದಿ ಹರೆಯಕ್ಕೆ ಬಂದಿದ್ದ ಮಗನಿಗೆ ತನ್ನದೇ ಬಯಕೆಗಳು “ ಅಪ್ಪ ನಾನು ಫೋಟೋಗ್ರಾಫರ್ ಆಗೋದು. ನಾನು ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ, ನನಗೊಂದು ಕ್ಯಾಮೆರಾ ಬೇಕು. ಗೆಳೆಯರಂತೆ ನನಗೂ ಓಡಾಡಲು ಒಂದು ಬೈಕು ಬೇಕು” ಹೀಗೆ ಬೇಕುಗಳ ಪಟ್ಟಿ ದೊಡ್ಡದಾಗುತ್ತಾ ಹೋಯಿತು. ರಾತ್ರಿ ಯಾರಿಗೂ ಊಟ ಸೇರಲಿಲ್ಲ. ನಿದ್ದೆ ಅಂತೂ ಎಲ್ಲೋ ಹಾರಿ ಹೋಗಿತ್ತು. ಬಿಸಿ ಬಿಸಿ ಚರ್ಚೆಯ ಗಾವು ಹೆಚ್ಚಾಗುತ್ತಾ ಹೋಯ್ತು.


ಮಾರನೇ ದಿನವೇ ವಿಜಯ್ ಅದರ rtc ರೆಕಾರ್ಡ್ ತೆಗೆಯಲು ಹೊರಟ. ಸರಿಯಾದ ಸರ್ವೇ ನಂಬರ್ ಗೊತ್ತಿಲ್ಲದೇ ಬೇಕಾದ ಡಾಕ್ಯುಮೆಂಟ್ಸ್ ಗೆ ಸುಮಾರು ಒಂದು ತಿಂಗಳವರೆಗೆ ಅದರ ಹಿಂದೆ ಓಡಾಡಿದ. ಆಗ ತಿಳಿದು ಬಂದ ವಿಚಾರವೇನಂದರೆ, ಅದಷ್ಟು ಜಾಗವು ಅವರ ಅಜ್ಜನ ಹೆಸರಿನಲ್ಲಿ ಇತ್ತು. ಆದರೆ ಅರ್ಧದಷ್ಟು ಭಾಗ ಚಿಕ್ಕಪ್ಪನ ಹೆಸರಿಗೆ ಹೋಗಿತ್ತು. ಈಗ ಇವರಿಗೆ ಉಳಿದಿದ್ದು ಸುಮಾರು ಎರಡುವರೆ ಎಕರೆಗಳಷ್ಟು ಇರಬಹುದು ಎಂಬುದಾಗಿತ್ತು. ಏನಾದರೂ ಆಗಲಿ ಆ ಉಪಯೋಗವಿಲ್ಲದ ಭೂಮಿಗೆ ಸಿಗುವ ಮೊತ್ತ, ಕಷ್ಟದಲ್ಲಿದ್ದ ಅವರಿಗೆ ದೊಡ್ಡದಾಗಿತ್ತು . ಅವನು ತನ್ನ ತೋಟದ ಕೆಲಸವನ್ನು ಪೂಜಾಗೆ ವಹಿಸಿ, ರೆಕಾರ್ಡ್ ಸರಿ ಮಾಡಿಕೊಳ್ಳಲು ಚಪ್ಪಲಿ ಸವೆಸಲು ಹೊರಟ.


ವ್ಯವಹಾರ ಹೇಗೆ ಮುಂದುವರಿಸುವುದು ಎಂದು ಸರಿಯಾದ ಮಾಹಿತಿ ಪಡೆಯಲು ಮೊದಲಿಗೆ ಅವನು ವಕೀಲರ ಬಳಿ ಹೋದ. “ಎಲ್ಲದಕ್ಕಿಂತ ಮೊದಲು ನೀನು, ನಿನ್ನ ಒಡಹುಟ್ಟಿದವರ ಒಪ್ಪಿಗೆ ಪಡೆಯಬೇಕಾಗುತ್ತದೆ. ರೆಕಾರ್ಡನ್ನು ಸರಿ ಮಾಡಲು ಮೊದಲಿಗೆ ನಿಮ್ಮ ಅಜ್ಜನ ಹೆಸರಿನಿಂದ ಅಪ್ಪನ ಹೆಸರಿಗೆ ಮಾಡಿಕೊಂಡು ನಂತರ ನಿಮ್ಮ ಹೆಸರಿಗೆ ಬದಲಾಯಿಸಬೇಕಾಗುತ್ತದೆ. ಮೊದಲು ನೀನು ಒಪ್ಪಿಗೆ ಪಡೆದುಕೊಂಡು ಬಾ, ಆನಂತರ ನಾನು ಎಲ್ಲಾ ವಿವರವಾಗಿ ಹೇಳುತ್ತೇನೆ.” ಎಂದರು ವಕೀಲರು. ವಿಜಯ್ ಗೆ, ಸುಜಯ್ ಎಂಬ ತಮ್ಮನಿದ್ದ, ಅವನು ಅಪ್ಪ ಇರುವಾಗಲೇ ತನ್ನ ಪಾಲು ತೆಗೆದುಕೊಂಡು ಬೇರೆ ಮನೆ ಮಾಡಿಕೊಂಡಿದ್ದ. ಅಣ್ಣ ತಮ್ಮರ ಸಂಬಂಧ ತುಂಬಾ ಹದಗೆಟ್ಟಿತ್ತು. ಆದರೂ ಏನಾದರೂ ಉಪಾಯ ಮಾಡಲೇ ಬೇಕಿತ್ತು. ಒಂದು ದಿನ ತಮ್ಮನ ಮನೆಗೆ ವಿಜಯ್ ಹೋದ, ಇರುವ ವಿಚಾರವನ್ನು ಹೇಳಿದ. “ನಿನಗೇನೋ ತಲೆಗೆಟ್ಟಿದೆ ಇದು ಆಗು ಹೋಗುವ ವಿಲೇವಾರಿ ಅಲ್ಲ. ಆದರೂ ನೀನು ಮುಂದುವರಿಯುವುದಾದರೆ ನನ್ನದೇನು ಅಭ್ಯಂತರವಿಲ್ಲ. ತಗಲುವ ಖರ್ಚಿನ ಬಗ್ಗೆ ಮಾತನಾಡಿದರೆ, ಅದರ ಬಗ್ಗೆ ಮುಂದೆ ನೋಡೋಣ” ಎಂದ.
“ಆ ಜಾಗದ ಬಗ್ಗೆ ಸಂಪೂರ್ಣ ಮಾಹಿತಿ ನನಗಿದೆ, ಅದರ ಗಡಿ ಎಲ್ಲಿ ಬರುತ್ತದೆ, ಚಿಕ್ಕಪ್ಪನಿಗೆ ಬಿಟ್ಟಿರುವ ಜಾಗ ಯಾವುದು ಎಲ್ಲಾ ಗೊತ್ತಿರುವುದು ನನಗೆ ಮಾತ್ರ”
ಎನ್ನುತ್ತಾ ಮನದಲ್ಲೇ ನಿನ್ನ ಕಾರ್ಯ ಸಫಲವಾಗಲು ಬಿಡೆನು ಅಂದುಕೊಳ್ಳುತ್ತಾ ಅಟ್ಟಹಾಸದ ತೋರಿಸಿಕೊಂಡ . ಯಾವುದನ್ನೂ ಹಚ್ಚಿಕೊಳ್ಳದೆ “ಸರಿ ಹಾಗಾದರೆ ಸರ್ವೆಯವರು ಬರುವಾಗ ನೀನೇ ನಿಂತು ಗಡಿಯನ್ನು ತೋರಿಸು, ನನಗೆ ಅದು ಸರಿಯಾಗಿ ಗೊತ್ತಿಲ್ಲ ” ಎಂದ ವಿಜಯ್. ಅಲ್ಲದೇ ಅವನಿಗೆ ವೀಣಾ ಮತ್ತು ವಿದ್ಯಾ ಎಂಬ ಇಬ್ಬರು ತಂಗಿಯರಿದ್ದರು, ಅವರಿಗೆ ಮದುವೆಯಾಗಿತ್ತು. ರೆಕಾರ್ಡ್ ಸರಿಯಾಗಬೇಕೆಂದರೆ ಅವರೆಲ್ಲರ ಸಹಿ ಅಗತ್ಯವಿದೆಯಲ್ಲವೇ? ತಮಗೆ ಬರುವ share ಬಂದರೆ ಮಾತ್ರ ತಾವು ಸಹಿ ಮಾಡುವುದೆಂದು ಎಲ್ಲಾ ಒಡಹುಟ್ಟಿದವರ ಆಶಯವಾಗಿತ್ತು . ಅಂತೂ ಎಲ್ಲರ ಒಪ್ಪಿಗೆ ಪಡೆದಾಯಿತು.
ಹಲವಾರು ಸಲ ಸರಕಾರಿ ಕಚೇರಿಗೆ ತಿರುಗಾಡಿದಾಗ, ಹೇಗಾದರೂ ಒಂದು ದಿನ ಸರ್ವೆಯವರು ಬಂದರು. ಯಾವ ಕೆಲಸಕ್ಕೂ ತಲೆ ಹಾಕದ ಸುಜಯ್, ಆ ದಿನವೂ ತಪ್ಪಿಸಿಕೊಂಡಿದ್ದ .

ನನಗೆ ಗಡಿ ಗೊತ್ತಿದೆ ಎಂದು ಅಂದು ಕೊಚ್ಚಿಕೊಂಡದ್ದು ಮಾತ್ರ, ಅವನಿಗೆ ಅದರ ಮಾಹಿತಿ ಇರಲಿಲ್ಲ ಅದಕ್ಕಾಗಿ ತಪ್ಪಿಸಿಕೊಂಡೆ ಎಂದೂ, ಮಾಹಿತಿ ಗೊತ್ತಿದೆ ಎಂದು ಹೇಳಿ ಅಣ್ಣನನ್ನು ಹೆದರಿಸಿ ಇಡುವ ಎಂಬುದು ಅವನ ಉದ್ದೇಶವಾಗಿತ್ತಂತೆ,ಗುರು ಹತ್ರ ಹೇಳಿಕೊಂಡಿದ್ದನಂತೆ . ಆ ದಿನ ಕಷ್ಟಪಟ್ಟು ಸುತ್ತಾಡಿ ಸುತ್ತಾಡಿ ಹೇಗಾದರೂ ಕೊನೆಗೆ ಅವರಿಗೆ ಗಡಿಯ ಗುರುತು ಸಿಕ್ಕಿತ್ತು . ಸರ್ವೆಯ ಕೆಲಸವು ನಡೆದು ಹೋಯಿತು.
ವಕೀಲರು ಇನ್ನೊಮ್ಮೆ ಕರೆದರು, “ ನಿಮ್ಮ ಚಿಕ್ಕಪ್ಪನಿಗೆ ಇದರಲ್ಲಿ ಹಿಸ್ಸೇ ಇಲ್ಲ ಅವರು ದಿವಂಗತರು ಕೂಡಾ , ಆದರೆ ಚಿಕ್ಕಪ್ಪನ ಕುಟುಂಬದವರ ಒಪ್ಪಿಗೆ ಹಾಗೂ ಸಹಿಯ ಅಗತ್ಯವಿದೆ. ಏಕೆಂದರೆ ರೆಕಾರ್ಡ್ ಅಜ್ಜನ ಹೆಸರಿನಿಂದ ನಿಮ್ಮ ಅಪ್ಪನ ಹೆಸರಿಗೆ ಆಗಬೇಕಲ್ಲವೇ? ಎಂದರು.ಸುಜಯ್ ಆಗ ಮುತುವರ್ಜಿ ವಹಿಸಿದ, ಚಿಕ್ಕಪ್ಪನ ಮಗನಲ್ಲಿ ನಾನು ಮಾತನಾಡುತ್ತೇನೆ ಅಂದ. ವಿಜಯ್ ಗೆ ಅವನ ದುರುದ್ದೇಶ ತಿಳಿಯಲಿಲ್ಲ, ಅವನು ತನ್ನ ಕೆಲಸ ಸ್ವಲ್ಪವಾದರೂ ಹಗುರವಾಯಿತಲ್ಲ ಎಂದು ಸುಜಯ್ ಗೆ ಆ ಕೆಲಸ ವಹಿಸಿಬಿಟ್ಟ.


ಒಂದೊಂದೇ ಕೆಲಸ ಆಗುತ್ತಾ ಹೋದಂತೆ ತಾನು ಅಂದು ಹೇಳಿದ ಮಾತು ಎಲ್ಲಿ ತಪ್ಪಾಗುತ್ತೋ ಎಂದು ಷಡ್ಯಂತ್ರ ರೂಪಿಸುತ್ತಾ ಚಿಕ್ಕಪ್ಪನ ಮಗನಲ್ಲಿ ಸುಜಯ್, ವಿಷಯವನ್ನು ವಿವರಿಸುತ್ತಾ “ ಸುಮ್ಮನೆ ಏನೂ ಪಡೆಯದೆ ನೀನು ಏಕೆ ಸಹಿ ಹಾಕಿಕೊಡುತ್ತೀಯಾ? ಅಣ್ಣನ ಕೈಯಿಂದ ಒಂದಿಷ್ಟಾದರೂ ಹಣ ವಸೂಲಿ ಮಾಡಿಕೋ, ನಿನಗೀಗ ಸದವಕಾಶವಲ್ಲವೇ?” ಎಂದು ವಿಷ ಬಿತ್ತಿದ . ಕಿಂಚಿತ್ ಹಣ ಕೊಟ್ಟರಾಯಿತು ಅದಕ್ಕೇಕೆ ಜಗಳ ಏಕೆ ಮಾಡಬೇಕೆಂದು ವಿಜಯ್ ಅದಕ್ಕೂ ಒಪ್ಪಿಕೊಂಡ. ಐದಾರು ಸಲ ತಾಲೂಕು ಪಂಚಾಯಿತಿಗೆ ಹೋಗಿ, ಅಲ್ಲಿಂದ ರೆಕಾರ್ಡನ್ನು ಗ್ರಾಮ ಪಂಚಾಯಿತಿ ಕಳಿಸಿ, ಗ್ರಾಮ ಪಂಚಾಯಿತಿ ಅವರಿಂದ ಒಪ್ಪಿಗೆ ಹಾಗೂ ಸಹಿ ಪಡೆದು, ಮತ್ತೆ ಪುನಃ ತಾಲೂಕು ಪಂಚಾಯಿತಿಗೆ ನಾಲ್ಕೈದು ಸಲ ಅಲೆದಾಡಿದಾಗ ಅಪ್ಪನ ಹೆಸರಿಗೆ ರಿಜಿಸ್ಟ್ರೇಷನ್ ಗೆ ಬಂತು. ಚಿಕ್ಕಪ್ಪನ ಮಗನಿಗೆ ಹಣವಿತ್ತು ಅಪ್ಪನ ಹೆಸರಿಗೆ ಭೂಮಿ ಮಾಡಿಕೊಳ್ಳಲಾಯಿತು.


ಮೊದಲಿನಂತೆ ಅದೇ ಪ್ರೊಸೀಜರ್, ತಾಲೂಕು ಮತ್ತೆ ಗ್ರಾಮ ಪಂಚಾಯಿತಿ ನಡುವೆ ನಡೆಯಬೇಕಿತ್ತು. ಇವುಗಳು ಸರಕಾರದ ಕೆಲಸವಾಗಿದ್ದರೆ, ಮುಂದಿನ ಹಂತ ಮನೆಯವರದ್ದಾಗಿತ್ತು. ಚಿಕ್ಕಪ್ಪನ ಮಗನಿಗಿಂತ ನೀತಿಗೆಟ್ಟವರು ಒಡಹುಟ್ಟಿದವರಾಗಿದ್ದರು. ಸರಕಾರದ ಕೆಲಸವಾಗಿ ರಿಜಿಸ್ಟ್ರೇಷನ್ ಗೆ ಬಂದಾಗ ಎರಡು ಸಲ ಒಮ್ಮೆ ತಮ್ಮ ಇನ್ನೊಮ್ಮೆ ತಂಗಿ ಆ ದಿನಕ್ಕೆ ತಪ್ಪಿಸಿಕೊಂಡರು. ಹೀಗೆ ಒಂದೊಂದು ಕೊಂಡಿ ಬಿಚ್ಚುತ್ತಾ, ಸರಕಾರದ ದಾಖಲೆ ಪಡೆಯಲು ಅಲೆದಾಡುತ್ತಾ, ವಕೀಲರ ಜೊತೆ ಕೋರ್ಟು ಕಚೇರಿ ಅಲೆಯುತ್ತಾ ಸುಮಾರು ಎರಡು ವರ್ಷಗಳ ಕಾಲದಲ್ಲಿ ಅಬ್ಬಬ್ಬಾ… ಎಂಬಂತೆ ಕೆಲಸ ಪೂರ್ಣಗೊಂಡಿತ್ತು.
ಸರಕಾರದ ಕೆಲಸವಾಗಬೇಕಾದರೆ ಎಷ್ಟು ಕೈ ಬಿಸಿ ಮಾಡಬೇಕು ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರವೇ. ವಕೀಲರ ಖರ್ಚು,ಉಳಿದೆಲ್ಲಾ ಖರ್ಚು ಸೇರಿ ದೊಡ್ಡ ಮೊತ್ತ ವಿಜಯ್ನ ಕೈ ಜಾರಿತು. ಎಲ್ಲರನ್ನೂ ಫುಸಲಾಯಿಸಿ,ನೀನು ಅಷ್ಟು ಹಣ ಕೇಳು ಇಷ್ಟು ಹಣ ಕೇಳು ಎಂದು ಹೇಳಿದ ಸುಜಯ್, ತಾನು ಒಂದು ರೂಪಾಯಿಯೂ ಖರ್ಚು ಮಾಡದೆ, ಸಿಕ್ಕಿದ ಪೂರ್ಣ ಮೊತ್ತದ ಸಮಾನ ಅರ್ಧ ಭಾಗ ತೆಗೆದುಕೊಂಡ. ತಂಗಿಯಂದಿರಿಗೂ ಕೊಡುವ ಪಾಲನ್ನು ವಿಜಯ್ ಅವರಿಗೆ ಕೊಟ್ಟ. ಎಲ್ಲರಿಗೂ ಹಂಚುತ್ತಾ ಕೊನೆಗೆ ವಿಜಯ್ ಗೆ ಉಳಿದದ್ದು , ಮಗನಿಗೆ ಕ್ಯಾಮರಾ ತೆಗೆದುಕೊಡುವಷ್ಟು ವಿತ್ತ ಮಾತ್ರ!!
ಕಂಡಿದ್ದಂತಹ ಕನಸೆಲ್ಲ ನುಚ್ಚುನೂರಾಗಿ ಹೋಯಿತು. “ಎಲ್ಲರಿಗೂ ಆ ಭಗವಂತ ನಿನಗೆ ಈ ಬದುಕಲ್ಲಿ ಇಂತಿಷ್ಟು ಎಂದು ಬರೆದಿರುತ್ತಾನೆ ಎಂದು ಹೇಳುತ್ತಾರಲ್ಲವೇ ಅದು ನಿಜವೇ” ಎಂದು ಇವುಗಳಿಂದ ರೋಸಿ ಹೋದ ವಿಜಯ್ ಹೇಳಿಕೊಂಡ.

✍️ಬರಹ : ಭಾರತೀ ನೀರ್ಪಾಜೆ ಹೌಸ್

SHARE
Loading spinner

Leave a Reply

Your email address will not be published. Required fields are marked *

error: Content is protected !!