ಮಂಜೇಶ್ವರ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಜೇಶ್ವರ ಇದರ 46ನೇ ವರ್ಷದ ಗಣೇಶೋತ್ಸವದ ಜಲಸ್ಥಂಭನ ಮೆರವಣಿಗೆ ಮಂಜೇಶ್ವರ ತಲುಪಿದ ಸಂದರ್ಭದಲ್ಲಿ ಮಾನವೀಯತೆ ಹಾಗೂ ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ನಡೆಯಿತು.


ಮಂಜೇಶ್ವರ ರೈಲ್ವೆ ನಿಲ್ದಾಣದ ಸಮೀಪದ ಆಟೋ ಚಾಲಕರ ಸಂಘದ ವತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ತಂಪು ಪಾನೀಯ ವಿತರಿಸಲಾಯಿತು. ಸುಮಾರು 2 ಸಾವಿರಕ್ಕೂ ಅಧಿಕ ಗ್ಲಾಸ್ ಪಾನೀಯ ವಿತರಿಸಿ ಆಟೋ ಚಾಲಕರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು ಹಾಗೂ ಸಾರ್ವಜನಿಕರಿಗೆ ಯಾವುದೇ ಭೇದಭಾವವಿಲ್ಲದೆ ಪಾನೀಯ ವಿತರಿಸುವ ಮೂಲಕ ಆಟೋ ಚಾಲಕರು ಸೇವಾ ಮನೋಭಾವ ಮೆರೆದರು.

ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವ ಮಂಜೇಶ್ವರ, ಉಪಾಧ್ಯಕ್ಷರಾದ ಹನೀಫ್ ಹಾಗೂ ಧರ್ಮರಾಜ್, ಸದಸ್ಯರಾದ ಸಾದಿಕ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ, ಫೈಝಲ್, ರವಿ, ಕೋಶಾಧಿಕಾರಿ ಸಫೀಕ್ ಸೇರಿದಂತೆ ಸಂಘದ ಎಲ್ಲಾ 52 ಮಂದಿ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಗಣೇಶೋತ್ಸವದ ಜಲಸ್ಥಂಭನ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಈ ಸೇವಾ ಕಾರ್ಯ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶಕ್ಕೆ ಸಾಕ್ಷಿಯಾಯಿತು.


