ವ್ಯಾಂಕೋವರ್: ಹಂಟಾವೈರಸ್ ಸೋಂಕು ತಗುಲಿದ್ದ ಕ್ರೂಸ್ ಹಡಗಿನಿಂದ ಮನೆಗೆ ಹಿಂದಿರುಗಿದ ನಾಲ್ವರು ಕೆನಡಿಯನ್ನರಲ್ಲಿ ಓರ್ವ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಕೆನಡಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಭಾನುವಾರ ಮಾಹಿತಿ ನೀಡಿದೆ. ಎಂವಿ ಹೊಂಡಿಯಸ್ ಹೆಸರಿನ ಕ್ರೂಸ್ ಹಡಗಿನಿಂದ ಮರಳಿದ್ದ ನಾಲ್ವರು ಕೆನಡಾ ನಾಗರಿಕರನ್ನು ಮೇ 10ರಂದು ಬ್ರಿಟಿಷ್ ಕೊಲಂಬಿಯಾಗೆ ತಲುಪಿದ ತಕ್ಷಣವೇ ಐಸೋಲೇಷನ್ಗೆ ಒಳಪಡಿಸಲಾಗಿತ್ತು. ಅವರಲ್ಲಿ ಒಬ್ಬರಿಗೆ ಹಂಟಾವೈರಸ್ ಸೋಂಕು ದೃಢಪಟ್ಟಿದ್ದು, ಮತ್ತೊಬ್ಬರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಉಳಿದ ಇಬ್ಬರ ಆರೋಗ್ಯ ಸ್ಥಿತಿಯನ್ನು ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸೋಂಕು ದೃಢಪಟ್ಟ ವ್ಯಕ್ತಿ ಹಾಗೂ ಅವರೊಂದಿಗೆ ಪ್ರಯಾಣಿಸಿದ್ದ ಮಹಿಳೆ ಇಬ್ಬರೂ ಯುಕಾನ್ ನಿವಾಸಿಗಳಾಗಿದ್ದು, ಪ್ರಸ್ತುತ ವಿಕ್ಟೋರಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕ್ರೂಸ್ ಹಡಗಿನಲ್ಲಿ ಪ್ರಯಾಣದ ವೇಳೆ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಡಗಿನ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಕನಿಷ್ಠ 10 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರಲ್ಲಿ ಡಚ್ ದಂಪತಿಯೂ ಸೇರಿದ್ದು, ದಕ್ಷಿಣ ಅಮೆರಿಕಾ ಪ್ರವಾಸದ ಸಂದರ್ಭದಲ್ಲೇ ಅವರು ಸೋಂಕಿಗೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ. ಬಳಿಕ ಹಡಗಿನ ಒಳಾಂಗಣ ಪರಿಸರದಲ್ಲಿ ಸೋಂಕು ಇತರ ಪ್ರಯಾಣಿಕರಿಗೆ ಹರಡಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ (PHAC) ಪ್ರಕಾರ, ಪ್ರಸ್ತುತ ದೇಶದ ಸಾಮಾನ್ಯ ಜನತೆಗೆ ಈ ಸೋಂಕಿನಿಂದ ಅಪಾಯ ಕಡಿಮೆ ಇದೆ. ದೃಢಪಟ್ಟ ಎಲ್ಲಾ ಪ್ರಕರಣಗಳೂ ಹಡಗು ಸಂಪರ್ಕಿತವಾಗಿದ್ದು, ಸಮುದಾಯ ಮಟ್ಟದಲ್ಲಿ ಸೋಂಕು ಹರಡುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಾಮಾನ್ಯವಾಗಿ ಹಂಟಾವೈರಸ್ ಇಲಿಗಳ ತ್ಯಾಜ್ಯದಿಂದ ಹರಡುತ್ತದೆ ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವುದು ಅಪರೂಪ. ಆದರೆ ಈ ಹಡಗಿನಲ್ಲಿ ಪತ್ತೆಯಾದ ‘ಆಂಡಿಸ್ ತಳಿ’ (Andes Strain) ಮಾತ್ರ ಮನುಷ್ಯರಿಂದ ಮನುಷ್ಯರಿಗೆ ನಿಕಟ ಸಂಪರ್ಕದ ಮೂಲಕ ಹರಡುವ ಸಾಮರ್ಥ್ಯ ಹೊಂದಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ತಳಿ ತೀವ್ರ ಉಸಿರಾಟದ ಸಮಸ್ಯೆ ಉಂಟುಮಾಡುವ ಸಾಧ್ಯತೆ ಹೊಂದಿದ್ದು, ಮರಣ ಪ್ರಮಾಣ ಶೇ.40ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ. ಆದರೆ, ಸೋಂಕಿತ ವ್ಯಕ್ತಿಯನ್ನು ಮೊದಲೇ ಐಸೋಲೇಷನ್ನಲ್ಲಿ ಇರಿಸಲಾಗಿದ್ದರಿಂದ ಸಾರ್ವಜನಿಕರೊಂದಿಗೆ ಯಾವುದೇ ಸಂಪರ್ಕವಾಗಿಲ್ಲ. ಹೀಗಾಗಿ ದೇಶದ ಜನರಿಗೆ ಇದರಿಂದ ಉಂಟಾಗುವ ಅಪಾಯ ‘ಬಹಳ ಕಡಿಮೆ’ ಎಂದು ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಇದು ಕೋವಿಡ್ನಂತೆ ಗಾಳಿಯಲ್ಲಿ ಸುಲಭವಾಗಿ ಹರಡುವ ಸೋಂಕಲ್ಲ. ದೀರ್ಘಕಾಲದ ನಿಕಟ ಸಂಪರ್ಕದಿಂದ ಮಾತ್ರ ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.