ಇರಾನ್ ವಿರುದ್ಧ ವ್ಯಾಪಕ ದಾಳಿಗಳ ಸರಣಿಯನ್ನು ಆರಂಭಿಸಿರುವುದಾಗಿ ಅಮೆರಿಕ ಸೇನೆ ತಿಳಿಸಿದೆ. ದಕ್ಷಿಣ ಇರಾನ್‌ನ ಸಿರಿಕ್ ಮತ್ತು ಖಶಮ್ ಪ್ರದೇಶಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿರುವುದನ್ನು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ದೃಢಪಡಿಸಿದೆ. ಹೋರ್ಮುಜ್ ಜಲಸಂಧಿಯಲ್ಲಿ ನಿನ್ನೆ ಇರಾನ್ ಮೂರು ಹಡಗುಗಳ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಈ ದಾಳಿ ನಡೆಸಿದೆ.
ನಿನ್ನೆ ಇರಾನ್ ದಾಳಿಗೆ ಒಳಗಾದ ಹಡಗುಗಳಲ್ಲಿ, ಕತಾರ್‌ನ ಅಲ್ ರೆಖಾಯತ್ ಎಂಬ ಎಲ್‌ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಸಾಗಣೆ ಹಡಗು ಕೂಡ ಸೇರಿದ್ದು, ಅದು ಗುಜರಾತಿನ ದಹೇಜ್ ಬಂದರಿಗೆ ತೆರಳುತ್ತಿತ್ತು.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮಾಹಿತಿ ಪ್ರಕಾರ, ಇರಾನ್‌ನ 80 ಗುರಿಗಳ ಮೇಲೆ ಅತ್ಯಂತ ನಿಖರ ದಾಳಿ ನಡೆಸಲಾಗಿದೆ. ವಾಯು ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿ ಉಡಾವಣಾ ವ್ಯವಸ್ಥೆಗಳು, ರಡಾರ್ ಕೇಂದ್ರಗಳು ಹಾಗೂ ಕಮಾಂಡ್ ಮತ್ತು ನಿಯಂತ್ರಣ ಜಾಲಗಳನ್ನು ಗುರಿಯಾಗಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಇದಲ್ಲದೆ, ಹೋರ್ಮುಜ್ ಜಲಸಂಧಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ (IRGC) ಬಳಸುತ್ತಿದ್ದ 60ಕ್ಕೂ ಹೆಚ್ಚು ಸಣ್ಣ ದೋಣಿಗಳನ್ನು ನಾಶಪಡಿಸಿರುವುದಾಗಿ ಸೆಂಟ್ರಲ್ ಕಮಾಂಡ್ ಹೇಳಿಕೊಂಡಿದೆ.
ಇರಾನ್ ದಾಳಿಗೆ ಒಳಗಾದ ಹಡಗುಗಳ ವಿವರಗಳನ್ನೂ ಅಮೆರಿಕ ಪ್ರಕಟಿಸಿದೆ.:
- ಮಾರ್ಷಲ್ ದ್ವೀಪಗಳ ಧ್ವಜ ಹೊಂದಿದ್ದ ಎಂ.ಟಿ. ಅಲ್ ರೆಖಾಯತ್
- ಸೌದಿ ಅರೇಬಿಯಾದ ಧ್ವಜ ಹೊಂದಿದ್ದ ಎಂ.ಟಿ. ವೆದ್ಯಾನ್
- ಲೈಬೀರಿಯಾದ ಧ್ವಜ ಹೊಂದಿದ್ದ ಎಂ.ಟಿ. ಸೈಪ್ರಸ್ ಪ್ರಾಸ್ಪೆರಿಟಿ.


