ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ; ಟ್ರಂಪ್ ಆಡಳಿತಕ್ಕೆ ಜನಾದೇಶದ ಪರೀಕ್ಷೆ!

ವಾಷಿಂಗ್ಟನ್: ಇರಾನ್ ಜೊತೆಗಿನ ಯುದ್ಧ, ಹಣದುಬ್ಬರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಅಮೆರಿಕದಲ್ಲಿ ಇಂದು (ನ.3) ನಿರ್ಣಾಯಕ ಮಧ್ಯಂತರ ಚುನಾವಣೆ ನಡೆಯುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಜನಾದೇಶದ ಪರೀಕ್ಷೆಯಾಗಿರುವ ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎರಡೂ ಸದನಗಳ ಮೇಲೆ ರಿಪಬ್ಲಿಕನ್ ಪಕ್ಷ ತನ್ನ ಹಿಡಿತ ಉಳಿಸಿಕೊಳ್ಳಲಿದೆಯೇ ಅಥವಾ ಡೆಮಾಕ್ರಟಿಕ್ ಪಕ್ಷ ಮುನ್ನಡೆ ಸಾಧಿಸಲಿದೆಯೇ ಎಂಬುದು ನಿರ್ಧಾರವಾಗಲಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ 435 ಸ್ಥಾನಗಳು ಹಾಗೂ ಸೆನೆಟ್‌ನ 100 ಸ್ಥಾನಗಳ ಪೈಕಿ 37 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಲ್ಲದೆ, 36 ರಾಜ್ಯಗಳ ರಾಜ್ಯಪಾಲರ ಆಯ್ಕೆಯೂ ನಡೆಯಲಿದೆ. ಓಹಿಯೊದಲ್ಲಿ ಭಾರತೀಯ ಮೂಲದ ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಆಮಿ ಆಕ್ಟನ್ ನಡುವೆ ತೀವ್ರ ಪೈಪೋಟಿ ಇದೆ.

ಭಾರತೀಯ ಮೂಲದ ಹಲವು ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಸ್ಪರ್ಧಿಸಿದ್ದು, ಸಂಸದರಾದ ರೋ ಖನ್ನಾ, ಪ್ರಮೀಳಾ ಜಯಪಾಲ್, ಆಮಿ ಬೇರಾ ಮತ್ತು ಸುಹಾಸ್ ಸುಬ್ರಹ್ಮಣ್ಯಂ ಪ್ರಮುಖರು. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ನಿತ್ಯಾ ರಾಮನ್ ಲಾಸ್ ಏಂಜಲೀಸ್ ಮೇಯರ್ ಹುದ್ದೆಗೆ ಕಣದಲ್ಲಿದ್ದಾರೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಡೆಮಾಕ್ರಟಿಕ್ ಪಕ್ಷಕ್ಕೆ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮುನ್ನಡೆ ಸಾಧ್ಯತೆ ಸೂಚಿಸಿವೆ. ಆದರೆ ಭಾರಿ ಬಹುಮತ ದೊರೆಯುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಡೆಮಾಕ್ರಟಿಕ್ ಪಕ್ಷ ಮುನ್ನಡೆ ಸಾಧಿಸಿದರೆ ಟ್ರಂಪ್ ಆಡಳಿತದ ನಿರ್ಧಾರಗಳ ಪರಿಶೀಲನೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಹಲವು ರಾಜ್ಯಗಳಲ್ಲಿ ಪ್ರಚಾರ ನಡೆಸಿ ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!