ಅಜ್ಮಾನ್: ಅಜ್ಮಾನ್ನ ಯುವರಾಜ ಹಾಗೂ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಖ್ ಅಮ್ಮಾರ್ ಬಿನ್ ಹಮೀದ್ ಅಲ್ ನುಐಮಿ ಅವರ ಉಪಸ್ಥಿತಿಯಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ (GMU) 23ನೇ ಘಟಿಕೋತ್ಸವವು ಅಜ್ಮಾನ್ನ ತುಂಬೆ ಮೆಡಿಸಿಟಿಯ ತುಂಬೆ ಗ್ರೌಂಡ್ಸ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆರು ಕಾಲೇಜುಗಳ ಒಟ್ಟು 606 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.


ತುಂಬೆ ಗ್ರೂಪ್ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಮಂದ ವೆಂಕಟರಮಣ ಉಪಸ್ಥಿತರಿದ್ದರು. ಪದವೀಧರರಲ್ಲಿ 422 ಮಹಿಳೆಯರು, 184 ಪುರುಷರು ಹಾಗೂ ಯುಎಇಯ ಏಳು ಎಮಿರೇಟ್ಗಳ 59 ವಿದ್ಯಾರ್ಥಿಗಳು ಸೇರಿದ್ದಾರೆ. ವೈದ್ಯಕೀಯ ಕಾಲೇಜಿನಿಂದ 184, ಆರೋಗ್ಯ ವಿಜ್ಞಾನದಿಂದ 141, ದಂತ ವೈದ್ಯಕೀಯದಿಂದ 102, ಫಾರ್ಮಸಿಯಿಂದ 86, ನರ್ಸಿಂಗ್ನಿಂದ 51 ಹಾಗೂ ಹೆಲ್ತ್ಕೇರ್ ಮ್ಯಾನೇಜ್ಮೆಂಟ್ ಮತ್ತು ಎಐ ಕಾಲೇಜಿನಿಂದ 42 ಮಂದಿ ಪದವಿ ಪಡೆದಿದ್ದಾರೆ. 100ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ನಾತಕೋತ್ತರ ಹಾಗೂ ಎಂಡಿ ಪದವಿಗಳನ್ನು ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ತುಂಬೆ ಮೊಯ್ದೀನ್, ಯುಎಇ ಆಡಳಿತಗಾರರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, ಪದವೀಧರರು ರೋಗಿಗಳ ಸೇವೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು. ಕುಲಪತಿ ಪ್ರೊ. ಮಂದ ವೆಂಕಟರಮಣ ಅವರು ಪದವೀಧರರಿಗೆ ಶುಭ ಹಾರೈಸಿ, ವಿಶ್ವವಿದ್ಯಾನಿಲಯದ ಬೆಂಬಲ ಮುಂದುವರಿಯಲಿದೆ ಎಂದರು.

ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ಸ್ 2027ರಲ್ಲಿ 2,297 ವಿಶ್ವವಿದ್ಯಾನಿಲಯಗಳ ಪೈಕಿ ಇಂಟರ್ನ್ಯಾಷನಲ್ ಔಟ್ಲುಕ್ ವಿಭಾಗದಲ್ಲಿ 99.4 ಅಂಕಗಳೊಂದಿಗೆ ಜಾಗತಿಕ ಪ್ರಥಮ ಸ್ಥಾನ ಪಡೆದಿದೆ. ಕ್ಯೂಎಸ್ ಅರಬ್ ರೀಜನ್ ರ್ಯಾಂಕಿಂಗ್ಸ್ 2027ರಲ್ಲಿ 125ನೇ ಸ್ಥಾನ ಹಾಗೂ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅನುಪಾತದಲ್ಲಿ ಅರಬ್ ಪ್ರದೇಶದಲ್ಲಿ ಮೊದಲ ಸ್ಥಾನ ಗಳಿಸಿದೆ. 2025ರಲ್ಲಿ 492 ಸಂಶೋಧನಾ ಪ್ರಕಟಣೆಗಳನ್ನು ಹೊರತಂದಿದ್ದು, 75ಕ್ಕೂ ಅಧಿಕ ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯಗಳೊಂದಿಗೆ ಸಂಶೋಧನಾ ಸಹಭಾಗಿತ್ವ ಹೊಂದಿದೆ.
1998ರಲ್ಲಿ ಅಜ್ಮಾನ್ನಲ್ಲಿ ಸ್ಥಾಪನೆಯಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯು ತುಂಬೆ ಗ್ರೂಪ್ ಒಡೆತನದಲ್ಲಿದ್ದು, ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಆರಂಭಗೊಂಡಿದೆ. ಹೆಚ್ಚಿನ ಮಾಹಿತಿಗೆ www.gmu.ac.ae ಸಂಪರ್ಕಿಸಬಹುದು.

