ಪ್ರಜ್ವಲ್ ದೇವರಾಜ್ ಈಗ ಸುದ್ದಿಯಲ್ಲಿದ್ದಾರೆ. ‘ಕರಾವಳಿ’ ಸಿನಿಮಾ ಟ್ರೇಲರ್ ಲಾಂಚ್ ಈವೆಂಟ್ಗೆ ಅವರು ಗೈರಾಗಿದ್ದರು. ಇದು ಚರ್ಚೆಯ ಕೇಂದ್ರ ಬಿಂದು ಆಯಿತು. ಅವರ ಫ್ಯಾನ್ಸ್ ಬಂದು ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಗಲಾಟೆ ಮಾಡಿದರು.
ಇದರ ಹಿಂದೆ ಪ್ರಜ್ವಲ್ ಕುಮ್ಮಕು ಇದೆ ಎಂಬ ಮಾತು ಕೇಳಿ ಬಂತು. ಈ ಎಲ್ಲಾ ವಿಷಯಕ್ಕೆ ಪ್ರಜ್ವಲ್ ದೇವರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ. ರಾಜ್ ಬಿ. ಶೆಟ್ಟಿ ಜೊತೆಗೆ ಯಾವುದೇ ಅಸಮಾಧಾನ ಇಲ್ಲ ಎಂಬ ಮಾತನ್ನು ನೇರವಾಗಿಯೇ ಹೇಳಿದ್ದಾರೆ.

‘ಕರಾವಳಿ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಪ್ರಜ್ವಲ್ ದೇವರಾಜ್. ರಾಜ್ ಬಿ. ಶೆಟ್ಟಿ ಅವರದ್ದು ಅತಿಥಿ ಪಾತ್ರ. ಆದರೆ, ಪೋಸ್ಟರ್ಗಳಲ್ಲಿ ಹೈಲೈಟ್ ಆಗುತ್ತಿರುವುದು ರಾಜ್ ಬಿ. ಶೆಟ್ಟಿ ಎಂಬ ಮಾತಿದೆ. ಬುಕ್ ಮೈ ಶೋ ಓಪನ್ ಮಾಡಿದರೆ ಸಿನಿಮಾದಲ್ಲಿ ರಾಜ್ ಅವರ ಪೋಸ್ಟರ್ ರಾರಾಜಿಸುತ್ತವೆ. ಇದೇನಾದರೂ ಪ್ರಜ್ವಲ್ ಅವರಿಗೆ ಬೇಸರ ಮೂಡಿಸಿತೇ ಎನ್ನುವ ಪ್ರಶ್ನೆ ಮೂಡೋದು ಸಹಜ. ಆದರೆ, ಇದನ್ನು ಅವರು ಸಂಪೂರ್ಣವಾಗಿ ಅಲ್ಲಗಳೆಯುತ್ತಾರೆ.
ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್ ದೇವರಾಜ್ ಮಾತನಾಡಿದ್ದಾರೆ. ಅವರಿಗೆ ರಾಜ್ ಅವರ ಮೇಲೆ ಯಾವುದೇ ಕೋಪ ಇಲ್ಲವಂತೆ. ಅವರನ್ನು ಒಳ್ಳೆಯ ಮನುಷ್ಯ ಎಂದು ಕೊಂಡಾಡಿದ್ದಾರೆ. ಒಂದೊಮ್ಮೆ ಇದೇ ಕಾರಣ ಆಗಿದ್ದರೆ ಇಷ್ಟು ದಿನ ಸಿನಿಮಾ ಪ್ರಚಾರದಲ್ಲಿ ಏಕೆ ಭಾಗಿ ಆಗುತ್ತಿದ್ದೆ ಎಂದು ಪ್ರಜ್ವಲ್ ಅವರು ಪ್ರಶ್ನೆ ಮಾಡಿದ್ದಾರೆ.


