ನವದೆಹಲಿ: ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸಬಲ್ಲ ಬಹುನಿರೀಕ್ಷಿತ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗ ಭಾನುವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಡೆಯಲಿರುವ ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಸಂಬಂಧಿತ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಭದ್ರತಾ ಕಾರಣಗಳಿಂದ ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಅಸ್ಸಾಂನಲ್ಲಿ ಏಪ್ರಿಲ್ 9ಕ್ಕೆ ಮತದಾನ
ಅಸ್ಸಾಂ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾರ್ಚ್ 16ರಂದು ಆರಂಭವಾಗಲಿದ್ದು, ಮಾರ್ಚ್ 23 ಕೊನೆಯ ದಿನವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ 126 ಸದಸ್ಯರ ವಿಧಾನಸಭೆಯಲ್ಲಿ 75 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು.
ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಮತದಾನ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾರ್ಚ್ 30ರಿಂದ ಆರಂಭವಾಗಿ ಏಪ್ರಿಲ್ 9ರವರೆಗೆ ನಡೆಯಲಿದೆ. ಮತದಾನ ಏಪ್ರಿಲ್ 23 ಮತ್ತು 29ರಂದು ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.
ತಮಿಳುನಾಡಿನಲ್ಲಿ ಏಪ್ರಿಲ್ 23ಕ್ಕೆ ಮತದಾನ
ತಮಿಳುನಾಡು ವಿಧಾನಸಭಾ ಚುನಾವಣೆಗೆ ಮಾರ್ಚ್ 30ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್ 6 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಕೇರಳದಲ್ಲಿ ಏಪ್ರಿಲ್ 9ರಂದು ಮತದಾನ
ಕೇರಳದಲ್ಲೂ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಎಡಪಕ್ಷಗಳ ಎಲ್‌ಡಿಎಫ್ ನಡುವೆ ನೇರ ಹಣಾಹಣಿ ನಡೆಯಲಿದೆ. ನಾಮಪತ್ರ ಸಲ್ಲಿಕೆ ಮಾರ್ಚ್ 16ರಿಂದ ಆರಂಭವಾಗಿ ಮಾರ್ಚ್ 23ರಂದು ಮುಕ್ತಾಯವಾಗಲಿದೆ.
ಪುದುಚೇರಿಯಲ್ಲಿ ಏಪ್ರಿಲ್ 9ಕ್ಕೆ ಮತದಾನ
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮಾರ್ಚ್ 16ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮಾರ್ಚ್ 23 ಕೊನೆಯ ದಿನವಾಗಿದೆ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.