ಪಾಟ್ನಾ: ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಗೆ ತೆರಳಲು ಸಮರ್ಪಕ ರೈಲು ವ್ಯವಸ್ಥೆ ಕಲ್ಪಿಸದಿರುವುದನ್ನು ಖಂಡಿಸಿ ಸಾವಿರಾರು ಅಭ್ಯರ್ಥಿಗಳು ಪಾಟಲಿಪುತ್ರ ರೈಲು ನಿಲ್ದಾಣದಲ್ಲಿ ಭಾನುವಾರ ಭಾರಿ ಪ್ರತಿಭಟನೆ ನಡೆಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಅಭ್ಯರ್ಥಿಗಳು ರೈಲು ಹಳಿಗಳ ಮೇಲೆ ನಿಂತು ರೈಲು ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮ ನಿಲ್ದಾಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ವರದಿಯಾಗಿದೆ.
ಭಾನುವಾರ ಎರಡು ಪಾಳಿಗಳಲ್ಲಿ ನಡೆಯಬೇಕಿದ್ದ ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಶನಿವಾರ ರಾತ್ರಿ ಸಾವಿರಾರು ಅಭ್ಯರ್ಥಿಗಳು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ರೈಲು ವ್ಯವಸ್ಥೆ ಮಾಡದಿರುವುದರಿಂದ ಭಾರಿ ಜನಸಂದಣಿ ಉಂಟಾಗಿ ಪ್ರತಿಭಟನೆಗೆ ಕಾರಣವಾಯಿತು.
ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸೂಕ್ತ ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದು, ಘಟನೆಯು ಕೆಲಕಾಲ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು.