ಸಿದ್ದಾಪುರದಲ್ಲಿ ವಿಶ್ವ ಜಲದಿನಾಚರಣೆ: ಗಂಗಾಪೂಜೆ, ಗೋಪೂಜೆ ಮೂಲಕ ಜಲ ಸಂರಕ್ಷಣೆಗೆ ಕರೆ

ಸಿದ್ದಾಪುರ: ಗ್ರಾಮ ವಿಕಾಸ ಸಮಿತಿ, ಸಿದ್ದಾಪುರ ಹಾಗೂ ಪರ್ಯಾವರಣ ಗತಿವಿಧಿ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದ ಇತಿಹಾಸ ಪ್ರಸಿದ್ಧ ಕಾಶಿಕಲ್ಲು ಕೆರೆ ವಠಾರದಲ್ಲಿ ವಿಶ್ವ ಜಲದಿನಾಚರಣೆ ಅಂಗವಾಗಿ ಗಂಗಾಪೂಜೆ, ಗೋಪೂಜೆ ಮತ್ತು ಭೂಮಿ ಸುಪೋಷಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಮಂಗಳೂರು ವಿಭಾಗದ ಗ್ರಾಮ ವಿಕಾಸ ಪರ್ಯಾವರಣ ವಿಭಾಗ ಪ್ರಮುಖರಾದ ಶ್ರೀಮತಿ ರಮಿತಾ ಸೂರ್ಯವಂಶಿ ಹಾಗೂ ಸಿದ್ದಾಪುರ ತಾಲೂಕು ಪರ್ಯಾವರಣ ಗತಿವಿಧಿ ಪ್ರಮುಖರಾದ ಆರ್ಗೋಡು ಶ್ರೀಕಾಂತ್ ಶೆಣೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಮಿತಾ ಸೂರ್ಯವಂಶಿ ಅವರು, ನೆಲ-ಜಲ ಸಂರಕ್ಷಣೆ ಇಂದಿನ ಅತ್ಯಂತ ಪ್ರಮುಖ ಕರ್ತವ್ಯವಾಗಿದ್ದು, ಮುಂದಿನ ಪೀಳಿಗೆಯನ್ನು ರೋಗಮುಕ್ತವಾಗಿಡಲು ಪ್ಲಾಸ್ಟಿಕ್, ರಾಸಾಯನಿಕ ಕೀಟನಾಶಕಗಳು ನೀರು ಮತ್ತು ಮಣ್ಣಿಗೆ ಸೇರುವುದನ್ನು ತಡೆಯುವುದು ಅತ್ಯವಶ್ಯಕ ಎಂದು ಹೇಳಿದರು. ನೀರು, ಮಣ್ಣು ಮತ್ತು ಗಾಳಿ ಶುದ್ಧವಾಗಿದ್ದರೆ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು.

ಶ್ರೀಕಾಂತ್ ಶೆಣೈ ಅವರು ನೀರಿನ ಸಂರಕ್ಷಣೆಯ ಅಗತ್ಯತೆಯನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ಸೂರಜ್ ಆಚಾರ್ಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀ ಚಂದ್ರಾನಂದ ಶೆಟ್ಟಿ ದಂಪತಿಗಳು ಗಂಗಾಪೂಜೆಯಲ್ಲಿ ಭಾಗವಹಿಸಿ ಕೆರೆಗೆ ಬಾಗಿನ ಅರ್ಪಿಸಿದರು. ಶ್ರೀ ಸೂರ ಪೂಜಾರಿ ದಂಪತಿಗಳು ಭೂಮಿ ಸುಪೋಷಣ ಪೂಜೆಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಿದ್ದಾಪುರ ತಾಲೂಕು ಸಂಯೋಜಕರಾದ ಶ್ರೀಕಾಂತ್ ನಾಯಕ್, ಗ್ರಾಮ ಸಂಯೋಜಕರಾದ ಎಸ್. ಪಾಂಡುರಂಗ ಪೈ, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೂಲಕ ನೆಲ-ಜಲ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!