ನವದೆಹಲಿ: ಕದನ ವಿರಾಮ ಉಲ್ಲಂಘಿಸಿ ವಾಣಿಜ್ಯ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಅಮೆರಿಕವು ಇರಾನ್ನ ಕ್ಷಿಪಣಿ, ಡ್ರೋನ್ ಸಂಗ್ರಹ ಕೇಂದ್ರಗಳು ಹಾಗೂ ಕರಾವಳಿ ರಾಡಾರ್ ತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯ 37 ಸೆಕೆಂಡ್ಗಳ ವಿಡಿಯೊವನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಬಿಡುಗಡೆ ಮಾಡಿದೆ.
ಜೂನ್ 25ರಂದು ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಸಿಂಗಾಪುರ ಧ್ವಜ ಹೊಂದಿದ್ದ ಎಂ/ವಿ ಎವರ್ ಲವ್ಲಿ ಸರಕು ಹಡಗಿನ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗಿದೆ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಇರಾನ್ನ ಕ್ರಮವು ಕದನ ವಿರಾಮ ಒಪ್ಪಂದದ ಉಲ್ಲಂಘನೆಯಾಗಿದ್ದು, ಹಾರ್ಮುಜ್ ಜಲಸಂಧಿಯ ನೌಕಾಯಾನ ಸುರಕ್ಷತೆಗೆ ಧಕ್ಕೆಯಾಗಿದೆ ಎಂದು ಅಮೆರಿಕ ಹೇಳಿದೆ. ಆದರೆ ದಾಳಿಯ ನಿಖರ ಸ್ಥಳವನ್ನು ಬಹಿರಂಗಪಡಿಸಿಲ್ಲ.
ಇದಕ್ಕೆ ಪ್ರತಿಕ್ರಿಯೆಯಾಗಿ, ಪರ್ಷಿಯನ್ ಕೊಲ್ಲಿಯಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಹೇಳಿಕೊಂಡಿದ್ದು, ಮತ್ತಷ್ಟು ದಾಳಿ ನಡೆದರೆ ಕಠಿಣ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದೆ.
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, “ಹಿಂಸೆಗೆ ಹಿಂಸೆಯೇ ಉತ್ತರ” ಎಂದು ಎಚ್ಚರಿಕೆ ನೀಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಡಗಿನ ಮೇಲಿನ ಡ್ರೋನ್ ದಾಳಿಯನ್ನು ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಖಂಡಿಸಿದ್ದಾರೆ.