ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ-ಪೋಷಕರ ಓರಿಯಂಟೇಶನ್ ಕಾರ್ಯಕ್ರಮ

ಬೆಂಗಳೂರು: ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಬ್ಲಾಕ್-ಬಿ ಕ್ಯಾಂಪಸ್‌ನಲ್ಲಿ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮತ್ತು ಪೋಷಕರ ಓರಿಯಂಟೇಶನ್ ಕಾರ್ಯಕ್ರಮವು ಜೂನ್ 19 ಮತ್ತು 20ರಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಇದು ಬ್ಲಾಕ್-ಬಿ ಕ್ಯಾಂಪಸ್‌ನ ಮೊದಲ ಶೈಕ್ಷಣಿಕ ವರ್ಷದ ಅಧಿಕೃತ ಆರಂಭಕ್ಕೆ ನಾಂದಿ ಹಾಡಿತು.

ಬಿ.ಕಾಂ., ಬಿ.ಎ. (ಅರ್ಥಶಾಸ್ತ್ರ, ಪತ್ರಿಕೋದ್ಯಮ ಹಾಗೂ ಮನಃಶಾಸ್ತ್ರ), ಬಿಸಿಎ ಮತ್ತು ಬಿಬಿಎ ಪದವಿ ಕೋರ್ಸ್‌ಗಳಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆ, ಪರೀಕ್ಷಾ ನಿಯಮಾವಳಿ, ಮಾರ್ಗದರ್ಶನ (ಮೆಂಟರಿಂಗ್) ವ್ಯವಸ್ಥೆ, ವಿದ್ಯಾರ್ಥಿ ಬೆಂಬಲ ಸೇವೆಗಳು, ನೀತಿಸಂಹಿತೆ ಹಾಗೂ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಲಭ್ಯವಿರುವ ವಿವಿಧ ಅವಕಾಶಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ಜೊತೆಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ಪರಿಚಯವೂ ಮಾಡಿಕೊಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಕ್ತಾ ಫೌಂಡೇಶನ್‌ನ ನಿರ್ದೇಶಕಿ ಡಾ. ಅಶ್ವಿನಿ ಎನ್.ವಿ. ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆ, ಮಾನಸಿಕ ಆರೋಗ್ಯ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವ ನಿರ್ಮಾಣದಲ್ಲಿ ಕುಟುಂಬ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಪೋಷಕರೊಂದಿಗೆ ನಡೆದ ಸಂವಾದದಲ್ಲಿ ಶಿಕ್ಷಣ ಸಂಸ್ಥೆ ಮತ್ತು ಕುಟುಂಬಗಳ ನಡುವಿನ ಸಹಭಾಗಿತ್ವದ ಅಗತ್ಯತೆಯನ್ನು ಅವರು ಒತ್ತಿಹೇಳಿದರು.

ವಿಶ್ವವಿದ್ಯಾಲಯದ ಉಪಕುಲಪತಿ ರೆ. ಡಾ. ವಿಕ್ಟರ್ ಲೋಬೋ ಎಸ್‌ಜೆ, ಪ್ರೊ-ವಿಸಿ ಡಾ. ಕ್ರಿಸ್ಟೋ ಸೆಲ್ವನ್, ರಿಜಿಸ್ಟ್ರಾರ್ ಡಾ. ವಾಜೀದ್, ಪರೀಕ್ಷಾ ನಿಯಂತ್ರಣಾಧಿಕಾರಿ (ಸಿಒಇ) ಪ್ರೊ. ಡಾ. ಗಾಡ್ವಿನ್ ಸೇರಿದಂತೆ ವಿವಿಧ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದ ಉಪಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ಮೂಲಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಜೀವನವನ್ನು ಆತ್ಮವಿಶ್ವಾಸದಿಂದ ಆರಂಭಿಸಲು ಅಗತ್ಯ ಮಾರ್ಗದರ್ಶನ ಒದಗಿಸಲಾಯಿತು.

ಓರಿಯಂಟೇಶನ್ ಕಾರ್ಯಕ್ರಮವನ್ನು ಡಾ. ಸಾರಾ ಕುಟ್ಟಿ ಹಾಗೂ ಶ್ರೀಮತಿ ಪಾರುಲ್ ಬಾತ್ರಾ ಅವರು ಸಂಯೋಜಿಸಿದರು. ಈ ಕಾರ್ಯಕ್ರಮವು ವಿಶ್ವವಿದ್ಯಾಲಯ ಮತ್ತು ಪೋಷಕರ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಸಮುದಾಯದ ಸಕ್ರಿಯ ಸದಸ್ಯರಾಗಿ ಬೆಳೆವ ನಿಟ್ಟಿನಲ್ಲಿ ಉತ್ತಮ ವೇದಿಕೆಯಾಗಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!