ಇಂಡೋನೇಷ್ಯಾಗೆ ಬ್ರಹ್ಮೋಸ್, ಅಸ್ತ್ರ ಕ್ಷಿಪಣಿಗಳ ಪೂರೈಕೆಗೆ ಭಾರತ ನಿರ್ಧಾರ

ನವದೆಹಲಿ, ಜು. 7: ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿಯ ಸಂದರ್ಭದಲ್ಲಿ ಭಾರತವು ಇಂಡೋನೇಷ್ಯಾಗೆ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಹಾಗೂ ಅಸ್ತ್ರ ಗಾಳಿಯಿಂದ-ಗಾಳಿಗೆ ಹೊಡೆಯುವ ಕ್ಷಿಪಣಿಗಳ ಪೂರೈಕೆಗೆ ಮುಂದಾಗಿರುವುದಾಗಿ ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಆಪರೇಷನ್ ‘ಸಿಂದೂರ್’ ವೇಳೆ ಅಸ್ತ್ರ ಕ್ಷಿಪಣಿಯ ಕಾರ್ಯಕ್ಷಮತೆಯಿಂದ ಪ್ರಭಾವಿತವಾಗಿರುವ ಇಂಡೋನೇಷ್ಯಾ ಈ ಕ್ಷಿಪಣಿಗಳನ್ನು ಖರೀದಿಸಲು ಆಸಕ್ತಿ ತೋರಿದೆ. ಜೊತೆಗೆ, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಹೆಚ್ಚುವರಿ ಬ್ಯಾಟರಿಗಳನ್ನೂ ಭಾರತ ಪೂರೈಸಲಿದೆ.

ರಕ್ಷಣಾ ಸಹಕಾರದ ಜೊತೆಗೆ ಇಂಡೋನೇಷ್ಯಾದ ಅಗತ್ಯಗಳಿಗೆ ತಕ್ಕಂತೆ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಅಭಿವೃದ್ಧಿಗೆ ಭಾರತ ತಾಂತ್ರಿಕ ನೆರವು ನೀಡಲಿದೆ. ಉಕ್ಕು, ನಿಕಲ್ ಹಾಗೂ ಅಪರೂಪದ ಖನಿಜಗಳ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವುದು ಮತ್ತು ಸಬಾಂಗ್ ಬಂದರಿನ ಜಂಟಿ ಅಭಿವೃದ್ಧಿ ಕುರಿತೂ ಉಭಯ ರಾಷ್ಟ್ರಗಳು ಸಹಕಾರ ವಿಸ್ತರಿಸಲಿವೆ.

ಜಕಾರ್ತಾದ ಅಧ್ಯಕ್ಷೀಯ ಅರಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂಪ್ರದಾಯಿಕವಾಗಿ ಅದ್ಧೂರಿ ಸ್ವಾಗತ ನೀಡಲಾಯಿತು. ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಚರ್ಚಿಸಿದರು.

ಭಾರತ–ಇಂಡೋನೇಷ್ಯಾ ನಡುವಿನ ರಕ್ಷಣಾ, ಆರ್ಥಿಕ ಹಾಗೂ ತಾಂತ್ರಿಕ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!