ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ತಾಯಿಯನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದಡಿ ಖ್ಯಾತ ಮೇಕಪ್ ಆರ್ಟಿಸ್ಟ್ ಜಾನ್ಮಣಿ ದಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯಾ ಹರಿದಾಸ್ ಅವರು ನೀಡಿದ ದೂರಿನ ಆಧಾರದ ಮೇಲೆ ಕೋಝಿಕ್ಕೋಡ್ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಜಾನ್ಮಣಿ ದಾಸ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಪ್ರಕಟಿಸಿ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ.

“ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನನ್ನನ್ನು ಒಂದು ಚಿಕ್ಕ ಮಗುವೆಂದು ಭಾವಿಸಿ ಕ್ಷಮಿಸಿ. ನಾನು ಹೇಳಿದ ವಿಷಯ ತಪ್ಪಾಗಿದೆ ಎಂಬುದು ಬಳಿಕ ಗೂಗಲ್ನಲ್ಲಿ ಪರಿಶೀಲಿಸಿದಾಗ ತಿಳಿಯಿತು. ಯಾವುದೇ ಹೇಳಿಕೆ ನೀಡುವ ಮೊದಲು ಅದನ್ನು ದೃಢಪಡಿಸಬೇಕಿತ್ತು. ಈ ವಿಷಯದಿಂದ ತುಂಬಾ ನೋವಾಗಿರುವುದರಿಂದ ತಡವಾದರೂ ಈ ವಿಡಿಯೊ ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಜಾನ್ಮಣಿ ದಾಸ್ ಹೇಳಿದ್ದಾರೆ.

ಇದರ ಜೊತೆಗೆ, ತಮ್ಮ ಹೇಳಿಕೆಯ ಬಳಿಕ ಕೇರಳ ಸೇರಿದಂತೆ ವಿದೇಶಗಳಿಂದಲೂ ಬೆದರಿಕೆ ಕರೆಗಳು ಬರುತ್ತಿವೆ ಎಂದು ಜಾನ್ಮಣಿ ದಾಸ್ ವಿಡಿಯೊದಲ್ಲಿ ತಿಳಿಸಿದ್ದಾರೆ.



