ಸಾಹಿತಿ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಅವರಿಗೆ ಪಂಚಮಿ ಪುರಸ್ಕಾರ ಪ್ರದಾನ

ಉಡುಪಿ: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಕಾರದೊಂದಿಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡ ಸಂಸ್ಕೃತಿ ಉತ್ಸವದ ಎರಡನೆ ದಿನದ ಕಾರ್ಯಕ್ರಮದಲ್ಲಿ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರವನ್ನು ಸಾಹಿತಿ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಅವರಿಗೆ ಪ್ರದಾನ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಟಿ.ಎನ್. ಸೀತಾರಾಂ ಅವರು, ಕೃತಕ ಬುದ್ದಿಮತ್ತೆ ಸಾಹಿತ್ಯ, ಸಂಸ್ಕೃತಿಗಳ ಕ್ಷೇತ್ರಕ್ಕೆ ಕಾಲಿಟ್ಟರೆ ಸೃಷ್ಠಿಶೀಲ ಮನಸ್ಸುಗಳು ನಾಶವಾಗಿ ದೊಡ್ಡ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ ಆತಂಕ ವ್ಯಕ್ತಪಡಿಸಿದರು.


ಗುರು ಲಂಕೇಶರನ್ನು ನೆನಪಿಸಿಕೊಂಡ ಅವರು, ಇದೇ ದಿನ ನನ್ನ ಗುರು ಪಿ.ಲಂಕೇಶ್ ತೀರಿಹೋಗಿರುವುದು. ಇಂದಿಗೆ 25ವರ್ಷಗಳಾಗಿವೆ. ಲಂಕೇಶ್ ಅವರು ನನ್ನನು ಮನುಷ್ಯರನ್ನಾಗಿ ಮಾಡಿದರು. ಅವರ ನಾಟಕಗಳಲ್ಲಿ ನಾನು ಮುಖ್ಯ ಪಾತ್ರ ವಹಿಸುತ್ತಿದ್ದೆ. ಅವರ ಪಲ್ಲವಿ ಸಿನೆಮಾದಲ್ಲಿ ನನಗೆ ನಾಯಕನಾಗಿ ನಟಿಸುವ ಅವಕಾಶ ಮಾಡಿಕೊಟ್ಟರು. ಅವರ ದೃಷ್ಠಿಕೋನ ಸಾಮಾನ್ಯರನ್ನು ಗುರುತಿಸುವುದು. ಇದು ನನ್ನ ಬದುಕಿನ ಬಹಳ ದೊಡ್ಡ ಪಾಠ ಮತ್ತು ದೀಪ ಎಂದು ಭಾವಿಸುತ್ತೇನೆ. ಆದುದರಿಂದ ನನ್ನ ಸಾಧನೆಗೆ ದೊರೆತ ಈ ಪ್ರಶಸ್ತಿಯಲ್ಲಿ ಮುಖ್ಯ ಪಾಲು ಲಂಕೇಶ್ ಅವರಿಗೆ ಸಲ್ಲಬೇಕು ಎಂದು ತಿಳಿಸಿದರು.


ಅಧ್ಯಕ್ಷತೆಯನ್ನು ಉಡುಪಿ ಹಿರಿಯ ವಿದ್ವಾಂಸ ನಾಡೋಜ ಪ್ರೊ.ಕೆ.ಪಿ.ರಾವ್ ವಹಿಸಿದ್ದರು. ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಮಾತುಗಳನ್ನಾಡಿದರು. ಲೇಖಕ ಜೋಗಿ, ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ್, ಪಂಚಮಿ ಟ್ರಸ್ಟ್‌ನ ಸಂಸ್ಥಾಪಕ ಡಾ.ಎಂ.ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿದ್ದರು. ಉದ್ಯಮಿ ಸುಗುಣ ಸುವರ್ಣ, ಕಲಾ ಪೋಷಕ ಭುವನಪ್ರಸಾದ್ ಹೆಗ್ಡೆ, ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು.


ಆಸ್ಟ್ರೋ ಮೋಹನ್ ಸ್ವಾಗತಿಸಿದರು. ಪುರಸ್ಕಾರ ಸಮಿತಿಯ ಸಂಯೋಜಕ ಜನಾರ್ದನ ಕೊಡವೂರು ವಂದಿಸಿದರು. ವಿದ್ಯಾ ಶ್ಯಾಮಸುಂದರ್ ಸನ್ಮಾನ ಪತ್ರ ವಾಚಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರಿಂದ ಗುಲಾಮನ ಸ್ವಾತಂತ್ರ್ಯ ಯಾತ್ರೆ ನಾಟಕ ಪ್ರದರ್ಶನಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!