ಬಜೆಟ್‌ನಲ್ಲಿ ಉಡುಪಿ ಜಿಲ್ಲೆಯ ನಿರ್ಲಕ್ಷ್ಯ ಆರೋಪ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಉಡುಪಿ: ಈ ಬಾರಿಯ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಅನುದಾನ ಒದಗಿಸದೇ ಮಲತಾಯಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ನಗರದ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು, ರಾಜ್ಯ ಸರಕಾರ 1.32ಲಕ್ಷ ಕೋಟಿ ಸಾಲ ಮಾಡಿ, ಗ್ಯಾರಂಟಿಯೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿ ಕಾಲ ಕಳೆಯುತ್ತಿದೆ. ಜಿಲ್ಲೆಯ ಐದು ಮಂದಿ ಶಾಸಕರು, ಇಲ್ಲಿನ ಬೇಡಿಕೆಗಳು, ಸಮಸ್ಯೆಗಳನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಗಮನಕ್ಕೆ ತಂದರೂ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.


ಜಿಲ್ಲೆಯ ಮರಳಿನ ಸಮಸ್ಯೆ, ವಸತಿ ಸಮಸ್ಯೆ, 9/11 ಸಮಸ್ಯೆ ಪ್ರಾಧಿಕಾರದ ಸಮಸ್ಯೆ ಹಾಗೂ ಕನರ್ವಶನ್ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗಳಿಗೂ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಸ್ಪಂದನೆ ಮಾಡಿಲ್ಲ. ಈ ಸರಕಾರಕ್ಕೆ ಇವುಗಳಿಗೆ ಪರಿಹಾರ ಒದಗಿಸಬೇಕು ಎಂಬುದು ಕೂಡ ಅನಿಸುತ್ತಿಲ್ಲ. ಇಂತಹ ಸರಕಾರವನ್ನು ನಾವು ಇತಿಹಾಸದಲ್ಲಿಯೇ ಕಂಡಿಲ್ಲ ಎಂದು ಅವರು ಟೀಕಿಸಿದರು.
ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಕೆ.ಉದಯ ಕುಮಾರ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ದಿನೇಶ್ ಅಮೀನ್, ಪೃಥ್ವಿರಾಜ್ ಶೆಟ್ಟಿ, ದಿನಕರ ಬಾಬು, ಗಿರೀಶ್ ಅಂಚನ್, ಶಿಲ್ಪಾ ಜಿ.ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನಾ ಪ್ರತಿಭಟನಾ ಮೆರವಣಿಗೆಯು ಜೋಡುಕಟ್ಟೆಯಿಂದ ನಗರ ಪ್ರಮುಖ ಮಾರ್ಗದಲ್ಲಿ ಸಾಗಿ, ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!