ಮಾರ್ಚ್ 20ರಂದು ತುಳು ಭವನದಲ್ಲಿ ‘ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ’

ಮಂಗಳೂರು: ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಉದ್ದೇಶದಿಂದ ತುಳು ಪರಿಷತ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಮಾರ್ಚ್ 20ರಂದು ನಗರದ ತುಳು ಭವನದಲ್ಲಿ ‘ಮೂರನೇ ವಿದ್ಯಾರ್ಥಿ ತುಳು ಸಮ್ಮೇಳನ’ವನ್ನು ಆಯೋಜಿಸಿವೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಳು ಪರಿಷತ್ ಅಧ್ಯಕ್ಷ ಶುಭೋದಯ್ ಆಳ್ವ, ಈ ಸಮ್ಮೇಳನ ಸಂಪೂರ್ಣವಾಗಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿಕೊಂಡಿದ್ದು, ಕಾರ್ಯಕ್ರಮದ ವಿವಿಧ ಭಾಗಗಳನ್ನು ವಿದ್ಯಾರ್ಥಿಗಳೇ ಮುನ್ನಡೆಸಲಿದ್ದಾರೆ ಎಂದು ಹೇಳಿದರು.

ಈ ಬಾರಿ ಪ್ರತಿಭಾವಂತ ವಿದ್ಯಾರ್ಥಿಗಳೇ ಉದ್ಘಾಟಕರಾಗಿ ಹಾಗೂ ಅಧ್ಯಕ್ಷರಾಗಿ ವೇದಿಕೆ ಅಲಂಕರಿಸಲಿದ್ದಾರೆ. ದೇರಳಕಟ್ಟೆಯ ನಿಟ್ಟೆ ವಿದ್ಯಾಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿ ಪ್ರೀತಮ್ ನಾಯಕ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜಿನ ಪದವಿ ವಿದ್ಯಾರ್ಥಿನಿ ಅಭಿಜ್ಞಾ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದ ಬೌದ್ಧಿಕ ಮೆರುಗನ್ನು ಹೆಚ್ಚಿಸಲು ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ಸಾಹಿತಿ ಡಾ. ಎಂ. ವೀರಪ್ಪ ಮೊಯಿಲಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಧಾನಸಭಾ ಸಭಾಪತಿಗಳಾದ ಯು.ಟಿ. ಖಾದರ್ ಕಾರ್ಯಕ್ರಮಕ್ಕೆ ಶುಭಹಾರೈಸಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ನಡೆಯುವ ಮೊದಲ ಗೋಷ್ಠಿಯಲ್ಲಿ ನಿಡಸೋಸಿ ಮಠದ ಮುರಾಧಿಪತಿಗಳು ಹಾಗೂ ಪರಿಸರ ತಜ್ಞರಾದ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳು ಉಪನ್ಯಾಸ ನೀಡಲಿದ್ದಾರೆ.

ಇದರ ಜೊತೆಗೆ ಎರಡನೇ ಗೋಷ್ಠಿಯಲ್ಲಿ ಆರು ಮಂದಿ ವಿದ್ಯಾರ್ಥಿಗಳು ತುಳುನಾಡಿನ ಸೌಹಾರ್ದ ಪರಂಪರೆಯ ಕುರಿತು ಸಮ್ಮೇಳನಾಧ್ಯಕ್ಷರೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ.

ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಿಗಾಗಿ ‘ತುಳು ತುತ್ತೈತ’ ಎಂಬ ಆಕರ್ಷಕ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ತುಳುನಾಡಿನ ಸಾಂಪ್ರದಾಯಿಕ ಉಡುಗೆಗಳನ್ನು ಪ್ರದರ್ಶಿಸಲಾಗುತ್ತದೆ. ಸಂಜೆ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಮಾಜಿ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಕರಾವಳಿಯ ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಲಿದ್ದಾರೆ.

ಮಾರ್ಚ್ 10ರಂದು ನಡೆದ ‘ಕಲಾಸಿರಿ’ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತುಳು ಪರಿಷತ್ ಗೌರವಾಧ್ಯಕ್ಷ ಪ್ರಭಾಕರ ನೀಮಾರ್ಗ, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮಣ್ಣ, ಕೋಶಾಧಿಕಾರಿ ಸುಮತಿ ಹೆಗ್ಡೆ, ಸಮ್ಮೇಳನ ಸಂಚಾಲಕಿ ಅಮಿತಾ ಅಶ್ವಿನ್, ಶಿಕ್ಷಕಿ ಹಾಗೂ ಸಮ್ಮೇಳನ ನಿರೂಪಕಿ ಸುಧಾ ನಾಗೇಶ್ ಮತ್ತು ಸ್ಪರ್ಧಾ ಸಂಚಾಲಕ ದುರ್ಗಾಪ್ರಸಾದ್ ಉಪಸ್ಥಿತರಿದ್ದು, ಸಮ್ಮೇಳನದ ಕುರಿತು ಸಮಗ್ರ ಮಾಹಿತಿ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!