ಬೆಂಗಳೂರು: ವಿಧಾನಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕವಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿ, ಸಮಯ ಸೂಚನೆ ನೀಡದೇ ಕಲಾಪವನ್ನು ಮುಂದೂಡಿದ ಘಟನೆ ನಡೆದಿದೆ.
ಲಿಖಿತ ರೂಪದಲ್ಲಿ ಸಲ್ಲಿಸಲಾಗಿದ್ದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡನೆಯ ವೇಳೆ ಈ ಘಟನೆ ನಡೆಯಿತು. ಸಚಿವ ಪರಮೇಶ್ವರ್ ಸದನದಲ್ಲಿ ಉತ್ತರಗಳನ್ನು ಮಂಡಿಸುತ್ತಿದ್ದಾಗಲೇ ವಿಪಕ್ಷ ಸದಸ್ಯರು ತೀವ್ರ ಟೀಕೆ ವ್ಯಕ್ತಪಡಿಸಿದರು. ಅಧಿವೇಶನ ಆರಂಭದಿಂದಲೇ ಸಚಿವರಿಂದ ನಿರೀಕ್ಷಿತ ಉತ್ತರಗಳು ಸಿಗುತ್ತಿಲ್ಲ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಖಾದರ್, ಸದನದಲ್ಲಿ ಎಲ್ಲಾ ಶಾಸಕರು ಪ್ರಶ್ನೆ ಕೇಳುತ್ತಾರೆ, ಆದರೆ ಎಲ್ಲ ಪ್ರಶ್ನೆಗಳು ಚುಕ್ಕೆ ಗುರುತಿನ ಪ್ರಶ್ನೆಗಳಾಗುವುದಿಲ್ಲ. ಗಮನ ಸೆಳೆಯುವ ಸೂಚನೆಗಳಿಗೆ ಸಹ ಸಚಿವರು ಸರಿಯಾದ ಉತ್ತರ ನೀಡುತ್ತಿಲ್ಲ. ಮೂರು ಬಾರಿ ಸೂಚನೆ ನೀಡಿದರೂ ಸುಧಾರಣೆ ಕಾಣಿಸುತ್ತಿಲ್ಲ. ಸಂಬಂಧಿಸಿದ ಸಚಿವರು ಬಂದು ಸ್ಪಷ್ಟನೆ ನೀಡುವವರೆಗೂ ಸದನ ನಡೆಸುವುದಿಲ್ಲ ಎಂದು ಹೇಳಿ ಕಲಾಪವನ್ನು ಮೊಟಕು ಮಾಡಿ ಪೀಠದಿಂದ ಹೊರ ನಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಸಭಾತ್ಯಾಗ ಮಾಡಿರುವುದು ಸರ್ಕಾರದ ಕಾರ್ಯವೈಖರಿಗೆ ನೀಡಿದ ಕಠಿಣ ಎಚ್ಚರಿಕೆ ಎಂದು ಹೇಳಿದರು. ಪ್ರತಿದಿನವೂ ಲಿಖಿತ ಪ್ರಶ್ನೆಗಳ ಪೈಕಿ ಕೇವಲ ಶೇ. 10 ರಿಂದ 30ರಷ್ಟು ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗುತ್ತಿದೆ. ಸರ್ಕಾರ ಸಂಪೂರ್ಣವಾಗಿ ಹಿಡಿತ ಕಳೆದುಕೊಂಡಿದೆ. ಸಚಿವರು ಸದನಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂದು ಆರೋಪಿಸಿದರು.
ಸ್ಪೀಕರ್ ನಡೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ಸರ್ಕಾರ ಬದುಕಿದ್ದರೆ ಮುಖ್ಯಮಂತ್ರಿ ಮುಂದೆ ಬಂದು ಕ್ಷಮೆ ಕೇಳಬೇಕು. ಮಾನ–ಮರ್ಯಾದೆ ಇದ್ದರೆ ಸಚಿವರು ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದರು.
ಇನ್ನೊಂದೆಡೆ ಶಾಸಕ ಸುನಿಲ್ ಕುಮಾರ್ ಮಾತನಾಡಿ, ವಿಧಾನಸಭೆ ಇತಿಹಾಸದಲ್ಲೇ ಸರ್ಕಾರದ ಧೋರಣೆಯನ್ನು ಖಂಡಿಸಿ ಸ್ಪೀಕರ್ ಪೀಠ ಬಿಟ್ಟು ಹೊರ ಹೋಗಿರುವುದು ಅಘಾತಕಾರಿ ಬೆಳವಣಿಗೆ. 40 ದಿನಗಳ ಅಧಿವೇಶನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುತ್ತಿಲ್ಲ. ಸರ್ಕಾರ ಈ ವಿಚಾರದಲ್ಲಿ ತಕ್ಷಣ ಎಚ್ಚೆತ್ತುಕೊಳ್ಳಬೇಕು ಹಾಗೂ ಮುಖ್ಯಮಂತ್ರಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.