ಬಂಟ್ವಾಳ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ವಿವಿಧ ಕಾರ್ಯಕ್ರಮಗಳಿಗೆ ಶುಭಕೋರುವ ಹೆಸರಿನಲ್ಲಿ ನೂರಾರು ಪ್ಲೆಕ್ಸ್ ಮತ್ತು ಬ್ಯಾನರ್‌ಗಳು ಅಕ್ರಮವಾಗಿ ಅಳವಡಿಕೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪ್ಲಾಸ್ಟಿಕ್ ಪ್ಲೆಕ್ಸ್‌ಗಳಿಗೆ ಸರ್ಕಾರ ನಿಷೇಧ ಹೇರಿದ್ದರೂ, ಹೆದ್ದಾರಿ ಬದಿಯಲ್ಲಿ ಸಾಲುಸಾಲಾಗಿ ಬ್ಯಾನರ್‌ಗಳು ರಾರಾಜಿಸುತ್ತಿರುವುದು ಕಂಡುಬರುತ್ತಿದೆ.
ವಿಶೇಷವಾಗಿ ಬಿಸಿರೋಡು ಪ್ರದೇಶದಲ್ಲಿ ರಸ್ತೆ ಅಂಚನ್ನು ಆಕ್ರಮಿಸಿಕೊಂಡು ಅಳವಡಿಸಿರುವ ಭಾರೀ ಗಾತ್ರದ ಬ್ಯಾನರ್‌ಗಳು ಯಾವ ಕ್ಷಣದಲ್ಲಾದರೂ ಕುಸಿದು ರಸ್ತೆ ಮೇಲೆ ಬೀಳುವ ಅಪಾಯ ಉಂಟಾಗಿದೆ. ಕೆಲವು ಬ್ಯಾನರ್‌ಗಳು ಈಗಾಗಲೇ ಸೊಂಟಮುರಿದು ರಸ್ತೆಯ ಕಡೆಗೆ ವಾಲಿ ನಿಂತಿದ್ದು, ವಾಹನ ಸವಾರರಿಗೆ ಜೀವಾಪಾಯ ಉಂಟುಮಾಡುವ ಸ್ಥಿತಿ ನಿರ್ಮಾಣವಾಗಿದೆ.
ವಾರದ ಹಿಂದೆ ಇದೇ ರೀತಿಯಾಗಿ ವಾಲಿ ನಿಂತಿದ್ದ ಪ್ಲೆಕ್ಸ್ ಒಂದು ರಸ್ತೆ ಮೇಲೆ ಕುಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಆ ವೇಳೆ ವಾಹನ ಸಂಚಾರ ಇರದ ಕಾರಣ ಅಪಾಯ ತಪ್ಪಿದೆ. ಆದರೆ, ಪ್ರಸ್ತುತವೂ ಬೃಹತ್ ಗಾತ್ರದ ಎರಡು ಬ್ಯಾನರ್‌ಗಳು ಅಪಾಯಕರವಾಗಿ ವಾಲಿ ನಿಂತಿರುವುದು ಗಮನಾರ್ಹವಾಗಿದೆ.
ಪ್ಲೆಕ್ಸ್‌ಗಳಲ್ಲಿ ಹಾಕಲಾಗುವ ಜಾಹೀರಾತುಗಳನ್ನು ನೋಡಲು ಪ್ರಯತ್ನಿಸುವ ವೇಳೆ ವಾಹನ ಸವಾರರ ಗಮನ ವಿಲಕ್ಷಣವಾಗುವುದರಿಂದ ಅಪಘಾತಗಳೂ ಸಂಭವಿಸಿರುವ ಉದಾಹರಣೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸಕ್ರಮವಾಗಿರಲಿ ಅಥವಾ ಅಕ್ರಮವಾಗಿರಲಿ, ಅಪಾಯಕಾರಿಯಾಗಿ ಅಳವಡಿಸಿರುವ ಪ್ಲೆಕ್ಸ್‌ಗಳಿಗೆ ಅವಕಾಶ ನೀಡಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ಕುರಿತು ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಗಮನಹರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.