ಬಂಟ್ವಾಳ: ಪುರಸಭಾ ವ್ಯಾಪ್ತಿಯ ನೇರಂಬೋಳು ಪ್ರದೇಶದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಉಂಟಾಗಿ, ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಮೂರು ತಿಂಗಳಿನಿಂದ ಸಮರ್ಪಕವಾಗಿ ನೀರು ಪೂರೈಕೆ ಆಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪುರಸಭೆಯ ಗಮನ ಸೆಳೆಯಲು ಮುಂದಾಗಿದ್ದಾರೆ.
ಈ ಪ್ರದೇಶದಲ್ಲಿ ಎರಡು ದಿನಕ್ಕೊಮ್ಮೆ ಕೇವಲ ಅರ್ಧ ಗಂಟೆ ಮಾತ್ರ ನೀರು ಸರಬರಾಜಾಗುತ್ತಿದ್ದು, ಅದೂ ಸಹ ಸಮರ್ಪಕ ಒತ್ತಡದಲ್ಲಿ ಬರದೆ ಸುಮಾರು 750 ಲೀಟರ್ ಮಾತ್ರ ಸಂಗ್ರಹವಾಗುತ್ತಿದೆ. ಈ ಪ್ರಮಾಣ ದಿನನಿತ್ಯದ ಅಗತ್ಯಗಳಿಗೆ ಸಾಲದೆ, ಮನೆಮಠದ ಕೆಲಸಗಳು ಕಷ್ಟಕರವಾಗಿವೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವುದು ದೊಡ್ಡ ಭಾರವಾಗಿದ್ದು, ಹತ್ತಾರು ಮನೆಗಳ ನಿವಾಸಿಗಳು ಕಳೆದ ಕೆಲವು ತಿಂಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಭಾಗದಲ್ಲಿ ಬೃಹತ್ ನೀರು ಸರಬರಾಜು ಯೋಜನೆಯ ಎರಡನೇ ಹಂತದ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಆಗುತ್ತಿದೆ. ಆರಂಭದಲ್ಲಿ 24 ಗಂಟೆ ನೀರು ನೀಡುವ ಭರವಸೆ ನೀಡಲಾಗಿದ್ದರೂ, ಪ್ರಸ್ತುತ ಅರ್ಧ ಗಂಟೆಯೂ ಸಮರ್ಪಕವಾಗಿ ನೀರು ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಬರುವ ಸಮಯದಲ್ಲಿ ಮನೆಮಂದಿ ಪೈಪ್ ಮುಂದೆ ಪಾತ್ರೆ ಹಿಡಿದು ಕಾಯುವ ಪರಿಸ್ಥಿತಿ ಕಂಡುಬರುತ್ತಿದೆ.
ನೀರಿನ ಕೊರತೆಯಿಂದ ಕೆಲವರು ಬಟ್ಟೆ ಒಗೆಯಲು ದೂರದ ನೇತ್ರಾವತಿ ನದಿ ತೀರಕ್ಕೆ ತೆರಳಬೇಕಾದ ಅನಿವಾರ್ಯತೆಯೂ ಉಂಟಾಗಿದೆ.
ನೇರಂಬೋಳು ಪ್ರದೇಶವು ಪುರಸಭಾ ವ್ಯಾಪ್ತಿಯಲ್ಲಿದ್ದರೂ ಗ್ರಾಮೀಣ ಸ್ವರೂಪ ಹೊಂದಿದೆ. ಮೇಲ್ಭಾಗದಲ್ಲಿರುವ ಮನೆಗಳಿಗೆ ನೀರು ತಲುಪುತ್ತಿದ್ದು, ಕೆಳಭಾಗದಲ್ಲಿರುವ ಹಲವಾರು ಮನೆಗಳಿಗೆ ನೀರು ಸಿಗದೆ ಸಮಸ್ಯೆ ಗಂಭೀರವಾಗಿದೆ.
ಹಿಂದೆ ಈ ಪ್ರದೇಶದಲ್ಲಿ ಇದ್ದ ಬೋರ್‌ವೆಲ್ ಮುಖ್ಯ ನೀರಿನ ಮೂಲವಾಗಿತ್ತು. ಆದರೆ ಅದರ ಸಂಪರ್ಕವನ್ನು ಕಡಿತಗೊಳಿಸಿರುವುದರಿಂದ ಅದು ಬಳಕೆಗೆ ಯೋಗ್ಯವಾಗಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.