ಬಂಟ್ವಾಳ: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ದೇವಸ್ಥಾನದ ಒಂದು ತಿಂಗಳ ಕಾಲದ ವಾರ್ಷಿಕ ಜಾತ್ರೆಯಲ್ಲಿ ಪುರಲ್ಲ ಚೆಂಡ್ ಎಂದೇ ಪ್ರಸಿದ್ದಿ ಪಡೆದಿರುವ 5 ದಿನಗಳ ಚೆಂಡಿನ ಉತ್ಸವ ವಿಶೇಷವಾಗಿದ್ದು, ಸಂಪ್ರದಾಯದಂತೆ ಎ.6 ರಂದು ಸೋಮವಾರ ಸಂಜೆ ಕೊಡಿ ಚೆಂಡಿನ (ಮೊದಲ ಚೆಂಡು) ಉತ್ಸವ ನಡೆಯಿತು.
ಮೊದಲ ದಿನದ ಚೆಂಡಿನ ಉತ್ಸವದಲ್ಲಿ ದೇಗುಲದ ತಂತ್ರಿಗಳು, ಅರ್ಚಕರು, ಆಡಳಿತ ಮಂಡಳಿಯ ಮೊಕ್ತೇಸರರು ಹಾಗೂ ದೇವಳದ ಪ್ರಮುಖರು ಪಾಲ್ಗೊಂಡಿದ್ದು, ದೇವಿಯಲ್ಲಿ ಪ್ರಾರ್ಥಿಸಿ ಬಳಿಕ ಕೊಂಬು, ವಾದ್ಯ ಬಿರುದಾವಳಿಯೊಂದಿಗೆ ಚೆಂಡನ್ನು ಗದ್ದೆಗೆ ತಂದು ಸಾಂಪ್ರದಾಯಿಕ ಮಾತುಗಳ ಮೂಲಕ ಚೆಂಡು ಹಿಡಿದಿದ್ದ ಗಾಣಿಗ ಮನೆತನದವರು ಚೆಂಡನ್ನು ಪರ್ದ ಖಂಡದ
ಮನೆತನದವರಿಗೆ ಕೊಟ್ಟು ಹಾರಿಸಿದ ಬಳಿಕ ಯುವಕರು, ಮಕ್ಕಳು ಚೆಂಡಾಟ ಆರಂಭಿಸಿದರು.
ಚೆಂಡನ್ನು ಗದ್ದೆಯ ಬದಿಗೆ ಮುಟ್ಟಿಸಿ ಚೆಂಡು ಹಾರಿಸಿದವರಿಗೆ ಎತ್ತಿಕೊಂಡು ಬಂದು ಕೊಟ್ಟರೆ ಅವರನ್ನು ಗೆದ್ದವರು ಎಂದು ಘೋಷಿಸಲಾಗುತ್ತದೆ. ಮೊದಲ ದಿನದ ಚೆಂಡಿನ ಉತ್ಸವದ ಬಳಿಕ ಕುಮಾರ ತೇರಿನ ಉತ್ಸವ ನಡೆಯಿತು. ದಿನಕ್ಕೆ ಮೂರು ಬಾರಿ ಚೆಂಡಾಟ ನಡೆದು ಬಳಿಕ ದೇವಸ್ಥಾನಕ್ಕೆ ತಂದು ಪೂಜೆ ನೆರವೇರಿಸಿ ಒಂದು ಸುತ್ತು ಮೆರವಣಿಗೆಯ ಮೂಲಕ ಚೆಂಡಿನ ಉತ್ಸವ ಸಂಪನ್ನಗೊಳ್ಳುತ್ತದೆ. ಈ ರೀತಿ ಐದು ದಿನಗಳ ಪುರಲ್ದ ಚೆಂಡಿನ ಉತ್ಸವ ನಡೆಯುತ್ತದೆ. ಎ. 10ರಂದು ಶುಕ್ರವಾರ ಕಡೇ ಚೆಂಡಿನ ಉತ್ಸವ, ಎ.11ರಂದು ಶನಿವಾರ ಸಂಜೆ ಮಹಾರಥೋತ್ಸವ ನಡೆಯಲಿದೆ.