ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಮಹಿಳಾ ಉದ್ಯೋಗಿಯೊಬ್ಬರಿಗೆ ಜಾತಿ ನಿಂದನೆ ಮಾಡಿ, ಮಾನಸಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ
ನೆಟ್ಲಮುಡ್ನೂರು ಗ್ರಾಮದ ನೆಕ್ಕರೆ ಮಠ ನಿವಾಸಿ ದೂರುದಾರರಾದ ಶೇಷಮ್ಮ (47 ವರ್ಷ) ಅವರು ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿವಿಧ ಶಾಖೆಗಳಲ್ಲಿ ಕಳೆದ 24 ವರ್ಷಗಳಿಂದ ಸೇವೆಯಲ್ಲಿದ್ದು, , ಕಳೆದ 17 ವರ್ಷಗಳಿಂದ ಅವರು ಖಾಯಂ ಗುಮಾಸ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದು, ಪ್ರಸ್ತುತ ಮಾಣಿ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದೂರಿನ ವಿವರದಂತೆ, ಎಪ್ರಿಲ್ 01ರಂದು ನಡೆದ ಸಿಬ್ಬಂದಿ ಸಭೆಯಲ್ಲಿ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಶೋಧ ಅವರು ಉಪಸ್ಥಿತರಿದ್ದು, ಹಾಜರಾತಿ ವಿಚಾರವಾಗಿ ಅಂದರೆ ಮಾರ್ಚ್ 29 ರಂದು ಕರ್ತವ್ಯಕ್ಕೆ ಹಾಜರಾಗದ ಬಗ್ಗೆ ಪಿರ್ಯಾದಿದಾರರು ಸಕಾರಣವನ್ನು ನೀಡಿದ್ದರೂ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಅವರು ಶೇಷಮ್ಮ ಅವರನ್ನು ಪ್ರಶ್ನಿಸಿ, ಮೇಜು ಬಡಿದು ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಎಪ್ರಿಲ್ 02 ರಂದು ಬೆಳಿಗ್ಗೆ ಪ್ರಭಾರ ಶಾಖಾ ವ್ಯವಸ್ಥಾಪಕ ಯತೀಶ್ ಡಿ. ಗೌಡ ಅವರು ರಜೆಯಲ್ಲಿದ್ದರೂ ಕಚೇರಿಗೆ ಬಂದು, ಶೇಷಮ್ಮ ಅವರ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. “ನೀನು ಕೆಳಜಾತಿಯವಳು, ಮೇಲಧಿಕಾರಿಗಳ ಎದುರು ಮಾತನಾಡುತ್ತೀಯಾ?” ಎಂದು ಜಾತಿ ಹಿಡಿದು ನಿಂದಿಸಿ, ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಶೇಷಮ್ಮ ಅವರು ಬಳಸುತ್ತಿದ್ದ ಕಂಪ್ಯೂಟರ್ ಅನ್ನು ಬ್ಲಾಕ್ ಮಾಡಿ, ಪ್ಲಗ್ ತೆಗೆದು ಅವರು ಕುಳಿತಿದ್ದ ಕುರ್ಚಿಯಿಂದ ಕೈಯಿಂದ ದೂಡಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಮನನೊಂದ ಶೇಷಮ್ಮ ಅವರಿಗೆ ಅದೇ ದಿನದಿಂದ ಕೆಲಸಕ್ಕೆ ಗೈರು ಆಗುವಂತೆ ನೋಟಿಸ್ ನೀಡಿ ಕಿರುಕುಳವನ್ನು ಮುಂದುವರಿಸಿರುತ್ತಾರೆ. ಈ ಬಗ್ಗೆ ಸೇಸಮ್ಮ ಅವರು ಮೇಲಾಧಿಕಾರಿಗಳಿಗೆ ಮನವಿ ಮಾಡಿದಾಗ, ಅವರ ಮನವಿ ಮೇರೆಗೆ ದಿನಾಂಕ ಏಪ್ರಿಲ್ 04 ರಂದು ಮೇಲಾಧಿಕಾರಿಗಳವರು ಮಾಣಿ ಶಾಖೆಗೆ ಆಗಮಿಸಿ ಪಿರ್ಯಾದಿದಾರರಲ್ಲಿ ಮೌಖಿಕವಾಗಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದ್ದರು.
ಆಸ್ಪತ್ರೆಗೆ ದಾಖಲು
ಎಪ್ರಿಲ್ 07 ರಂದು ಶೇಷಮ್ಮ ಅವರು ಕಚೇರಿಗೆ ಹೋದಾಗ ಮತ್ತೆ ಕಂಪ್ಯೂಟರ್ ಪಾಸ್‌ವರ್ಡ್ ನೀಡದೆ ಕಿರುಕುಳ ನೀಡಿದ್ದರಿಂದ, ಮಾನಸಿಕವಾಗಿ ನೊಂದುಕೊಂಡ ಅವರು ಕಚೇರಿಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಏಪ್ರಿಲ್ 10 ರವರೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.
ಶೇಷಮ್ಮ ಅವರು ನೀಡಿದ ದೂರಿನ ಪ್ರಕಾರ, ಆರೋಪಿಗಳು ಕಚೇರಿಯ ಕೆಲಸದ ವಿಚಾರದಲ್ಲಿ ತಾರತಮ್ಯ ಎಸಗಿದ್ದಲ್ಲದೆ, ಇತರ ಸಿಬ್ಬಂದಿಗಳ ಮುಂದೆ ದೂರುದಾರರ ಜಾತಿಯನ್ನು ಎತ್ತಿ ಹಿಡಿದು ಅವಮಾನಿಸಿದ್ದಾರೆ. ಅಲ್ಲದೆ, ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಮನನೊಂದ ಶೇಷಮ್ಮ ಅವರು ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಶೋದಾ ಮತ್ತು ಪ್ರಭಾರ ಶಾಖಾ ವ್ಯವಸ್ಥಾಪಕ ಯತೀಶ್ ಡಿ. ಗೌಡ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 74, 49 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಸ್ತುತ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಅವರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಪ್ರಸ್ತುತ ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿ, ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ.