ಕುಡಿಯುವ ನೀರಿಗಾಗಿ ಬಂಟ್ವಾಳದಲ್ಲಿ ಬೃಹತ್ ಪ್ರತಿಭಟನೆ

ಬಂಟ್ವಾಳ, ಏಪ್ರಿಲ್:
ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಖಂಡಿಸಿ ಕೌಡೇಲು ಮತ್ತು ರಂಗೇಲ್ ನಾಗರಿಕ ಸಮಿತಿ ವತಿಯಿಂದ ಬಂಟ್ವಾಳ ಪುರಸಭೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಪುರಸಭೆ ಕಚೇರಿಯ ಮುಂದೆ ಬಟ್ಟೆಗಳನ್ನು ನೇತಾಡಿಸಿ, ಕೊಡ ಹಾಗೂ ಬಕೆಟ್‌ಗಳನ್ನು ಇಟ್ಟು ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಈ ವೇಳೆ ಮಾತನಾಡಿದ ಕಬೀರ್ ಆಹಮ್ಮದ್ ಅವರು, ಕೌಡೇಲು ಮತ್ತು ರಂಗೇಲ್ ಭಾಗದ ನಿವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ಯೆ ಬಗ್ಗೆ ಹಲವಾರು ಬಾರಿ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದ ಅವರು, ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಕಾಣಿಸುವ ಜನಪ್ರತಿನಿಧಿಗಳು ಇದೀಗ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ನೀರು ಇಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಬಿಲ್ ನೀಡುವ ಅಧಿಕಾರಿಗಳ ವಿರುದ್ಧವೂ ಪ್ರಶ್ನೆ ಎತ್ತಿದರು.

ಪ್ರತಿಭಟನೆ ವೇಳೆ ಪುರಸಭೆಯ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಸ್ಥಳಕ್ಕಾಗಮಿಸಿ, ಯೋಜನೆ ಹಾಗೂ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ನೀರು ಪೂರೈಕೆ ಅಡಚಣೆಯಾಗುತ್ತಿದೆ ಎಂದು ವಿವರಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು “ನಮಗೆ ಕಾರಣ ಬೇಡ, ನೀರು ಬೇಕು” ಎಂದು ಒತ್ತಾಯಿಸಿದರು. ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಪೋಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಮನಗೊಳಿಸಿ, ನಂತರ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಪ್ರತಿಭಟನಾ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಭರವಸೆ ನೀಡಲಾಯಿತು.

ಇದೇ ವೇಳೆ ಕುಡಿಯುವ ನೀರನ್ನು ತೋಟಗಳಿಗೆ ಬಳಸುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಕುರಿತು ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!