ಮಡಿಕೇರಿ:ನಾಲ್ಕು ವರ್ಷದ ಬಳಿಕ ಲವ್ವರ್ ಜತೆ ಸಿಕ್ಕಿಬಿದ್ದ ಕೊಲೆಗೀಡಾದ್ದಾಳೆ ಎನ್ನಲಾದ ಪತ್ನಿ!,2 ವರ್ಷ ಜೈಲುಶಿಕ್ಷೆ ಅನುಭವಿಸಿ ನಿರಪರಾಧಿಯಾಗಿ ಬಿಡುಗಡೆಯಾದ ಪತಿ

 ಪತ್ನಿಯನ್ನು ಕೊಂದಿದ್ದಾನೆ ಎಂಬ ಆರೋಪದಲ್ಲಿ ೨ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಪತಿಗೆ ಕೊನೆಗೂ ನ್ಯಾಯಾಲಯವು ನಿರಪರಾಧಿ ಎಂದು ಘೋಷಿಸಿದೆ. ವಿಶೇಷವೆಂದರೆ, ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ನ್ಯಾಯಾಲಯವೇ ಶಿಕ್ಷೆ ವಿಧಿಸಿತ್ತು. ಇದೀಗ ‘ಪೊಲೀಸರು ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆತ ತಪ್ಪು ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದೆ.ತಾನು ಯಾವುದೇ ರೀತಿಯ ತಪ್ಪು ಮಾಡದೇ 2 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯನ್ನು ಗೌರವಯುತವಾಗಿ ಬಿಡುಗಡೆ ಮಾಡಿದೆ.

ಸುಮಾರು 4 ವರ್ಷದ ಹಿಂದೆ ಮೈಸೂರು ಜಿಲ್ಲೆಯ ಬೆಟ್ಟದಪುರದ ಶಾನುಭೋಗನಹಳ್ಳಿಯಲ್ಲಿ ಮಹಿಳೆಯ ಶವವು ಪತ್ತೆಯಾಗಿತ್ತು. ಮೃತ ಮಹಿಳೆಯನ್ನು ಕೊಡಗಿನ ಕುಶಾಲನಗರದ ನಿವಾಸಿ ಮಲ್ಲಿಗೆ ಎಂದು ಗುರುತಿಸಲಾಗಿತ್ತು. ಆ ಮಹಿಳೆಯನ್ನು ಆಕೆಯ ಗಂಡ ಸುರೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಬೆಟ್ಟದಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಆರೋಪಿಗೆ ೨ ವರ್ಷ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಆದರೆ ಏ.1ರಂದು ಅದೇ ಮಹಿಳೆ ಆಕೆಯ ಪ್ರಿಯತಮ ಗಣೇಶ್‌ನೊಂದಿಗೆ ಮಡಿಕೇರಿ ನಗರದಲ್ಲೇ ಪತ್ತೆಯಾಗುತ್ತಾಳೆ. ಬಳಿಕ ಪ್ರಕರಣ ತಿರುವು ಪಡೆದುಕೊಂಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಮೈಸೂರಿನ 5ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಪೊಲೀಸ್ ತನಿಖಾಧಿಕಾರಿಗಳ ಕರ್ತವ್ಯ ಲೋಪವನ್ನು ಎತ್ತಿಹಿಡಿದಿತ್ತು. ಏ.23ಕ್ಕೆ ಆದೇಶ ಕಾಯ್ದಿರಿಸಿತ್ತು. ಈ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯ ಕೊಲೆ ಮಾಡದೇ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಸುರೇಶ್ ಎಂಬುವವರನ್ನು ನಿರಪರಾಧಿ ಎಂದು ಘೋಷಣೆ ಮಾಡಿ ಬಿಡುಗಡೆ ಮಾಡಿದೆ.

ಈ ಕೊಲೆ ಆರೋಪದಲ್ಲಿ ಜೈಲುವಾಸ ಅನುಭವಿಸಿದ್ದ ಕುಶಾಲನಗರದ ಬಸವನಹಳ್ಳಿ ನಿವಾಸಿ ಸುರೇಶ್ ಅವರನ್ನು ನಿರಪರಾಧಿ ಎಂದು ಘೋಷಿಸುತ್ತಿದ್ದಂತೆ ಕುಟುಂಬಸ್ಥರು ಕಣ್ಣಿರಾದರು. ಪ್ರಕರಣ ಸಂಬಂಧ, ಪೊಲೀಸ್ ದಾಖಲೆಗಳಿಂದ ಅವರ ಹೆಸರನ್ನು ತೆಗೆದು ಹಾಕುವಂತೆ ಬೆಟ್ಟದಪುರ ಪೊಲೀಸರಿಗೆ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಸೂಚನೆ ನೀಡಿದರು. ಆರೋಪಿಯ ಜಾಮೀನು ಬಾಂಡ್ ಮತ್ತು ಅವರ ಶೂರಿಟಿ ಬಾಂಡ್ ಅನ್ನು ರದ್ದುಗೊಳಿಸಲಾಗಿದ್ದು, ಅವರಿಗೆ 1 ಲಕ್ಷ ಪರಿಹಾರ ನೀಡುವಂತೆ ಸರ್ಕಾರದ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದರು.

ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಬೈಲಕುಪ್ಪೆ ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್ ವಿರುದ್ಧ ಐಪಿಸಿ ಸೆಕ್ಷನ್ 193, 195ರ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗೆ ಸೂಚಿಸಿದ್ದಾರೆ. ಅಲ್ಲದೇ ತನಿಖಾ ತಂಡದಲ್ಲಿದ್ದ ಅಂದಿನ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್, ಬೆಟ್ಟದಪುರ ಪಿಎಸ್ ಐ ಮಹೇಶ್ ಕುಮಾರ್, ಎಸ್‌ಐ ಪ್ರಕಾಶ್ ಯತ್ತಿಮನಿ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಮೈಸೂರು ಐಜಿಪಿಗೆ ಆದೇಶಿಸಿದ್ದಾರೆ. ಹಾಗೆಯೇ ಪ್ರಸ್ತುತ ಪ್ರಕರಣದಲ್ಲಿ ದಾಖಲಾದ ಯುಡಿಆರ್ ಕುರಿತು ತನಿಖೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ. 

ಬಿಡುಗಡೆ ಬಳಿಕ ಮಾತನಾಡಿರುವ ಸುರೇಶ್ ಅವರು, ತಾನು ಮಾಡದೇ ಇರುವ ತಪ್ಪಿಗೆ 2 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು. ಮಾಡದೇ ಇರುವ ಕೊಲೆಯನ್ನು ತನ್ನ ತಲೆಯ ಮೇಲೆ ಎತ್ತಿ ಹಾಕಿದರು. ಗೊತ್ತಿಲ್ಲದ ಸ್ಥಳದಲ್ಲಿ ಮಹಜರು ಮಾಡಿದರು. ನನಗೆ ಶಿಕ್ಷೆ ಕೊಟ್ಟ ಹಾಗೆ ಬಡವರ್ಗದ ಹಲವು ಜನರಿಗೂ ಶಿಕ್ಷೆ ನೀಡಿ ಮಾಡದೇ ಇರುವ ತಪ್ಪುಗಳನ್ನು ಬೇರೆ ಯಾರೋ ಮೇಲೆ ಕೇಸ್ ಹಾಕಿದ್ದಾರೋ ಗೊತ್ತಿಲ್ಲ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಲ್ಲದೇ ತನ್ನ ಪರ ನ್ಯಾಯಾಲಯದಲ್ಲಿ ವಕೀಲರಾದ ಪಾಡು ಪೂಜಾರಿ ಅವರು ವಾದ ಮಾಡಿ ತನ್ನ ಬಳಿ 1 ರೂ. ಹಣವನ್ನೂ ಪಡೆಯದೇ ತನಗೆ ನ್ಯಾಯ ಕೊಡಿಸಿದ್ದಾರೆ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!