ಮಂಗಳೂರು: ಕುದ್ರೋಳಿ ಕ್ಷೇತ್ರಕ್ಕೆ ನೂತನ ಆಡಳಿತ ಸಮಿತಿ ಆಯ್ಕೆ

ಮಂಗಳೂರು : ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ 2026-27ನೇ ಸಾಲಿನ ಆಡಳಿತ ಸಮಿತಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.) ವತಿಯಿಂದ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ರವಿಶಂಕರ್ ಮಿಜಾರ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ಜೂನ್ 20ರಂದು ನಡೆದ ಅನಧಿಕೃತ ಸಭೆ ವಿರುದ್ಧ ಕಾನೂನು ಹೋರಾಟ ನಡೆಸಲಾಗಿದ್ದು, ಅಧ್ಯಕ್ಷರ ಅನುಮತಿ ಹಾಗೂ ಅಗತ್ಯ ಬಹುಮತವಿಲ್ಲದೆ ನಡೆದ ಸಭೆ ಅಸಂವಿಧಾನಿಕವಾಗಿತ್ತು ಎಂದು ಹೇಳಿದರು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಸುದೀರ್ಘ ವಿಚಾರಣೆಯ ಬಳಿಕ ಜಿಲ್ಲಾ ನ್ಯಾಯಾಲಯವು ತಮ್ಮ ಪರವಾಗಿ ತೀರ್ಪು ನೀಡಿದೆ ಎಂದು ಅವರು ವಿವರಿಸಿದರು.

ಫೆಬ್ರವರಿ 16, 2026ರಂದು ನಾರಾಯಣ ಗುರು ಕಾಲೇಜಿನ ಸಭಾಂಗಣದಲ್ಲಿ ನಡೆದ ಯೂನಿಯನ್‌ನ ವಾರ್ಷಿಕ ಪ್ರತಿನಿಧಿ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ನಿಯಮಾನುಸಾರ 50 ಸದಸ್ಯರ ಎಕ್ಸಿಕ್ಯೂಟಿವ್ ಸಮಿತಿ ರಚಿಸಿ, ಅದರಲ್ಲಿ ಒಂಬತ್ತು ಮಂದಿಯನ್ನು ಕ್ಷೇತ್ರದ ಆಡಳಿತ ಸಮಿತಿಗೆ ಚುನಾಯಿತರನ್ನಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳಾಗಿ ಎಚ್.ಎಸ್. ಸಾಯಿರಾಮ್ (ಅಧ್ಯಕ್ಷ), ಊರ್ಮಿಳಾ ರಮೇಶ್ ಕುಮಾರ್ (ಉಪಾಧ್ಯಕ್ಷ), ರವಿಶಂಕರ್ ಮಿಜಾರ್ (ಕಾರ್ಯದರ್ಶಿ), ಶೇಖರ್ ಪೂಜಾರಿ (ಖಜಾಂಚಿ) ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಜಗದೀಶ್ ಸುವರ್ಣ, ಕೆ.ಟಿ. ಸುವರ್ಣ, ಎಚ್. ರತೀಂದ್ರನಾಥ್, ಸದಾನಂದ ಪೂಜಾರಿ ಮತ್ತು ಶರತ್ ಸುವರ್ಣ ಇದ್ದಾರೆ ಎಂದರು .

ಬಿಲ್ಲವ ಸಮಾಜದ ಗುರು-ಹಿರಿಯರ ಆಶಯದಂತೆ ಬೈಲಾ ಪ್ರಕಾರವೇ ಸಮಿತಿ ರಚನೆಯಾಗಿದ್ದು, ಭಕ್ತರ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷರಾದ ಎಚ್.ಎಸ್ ಸಾಯಿರಾಮ್ , ಖಜಾಂಚಿಗಳಾದ ಶೇಖರ್ ಪೂಜಾರಿ , ಸದಸ್ಯರಾದ ಜಗದೀಶ್ ಸುವರ್ಣ, ಕೆ.ಟಿ ಸುವರ್ಣ, ಸದಾನಂದ ಪೂಜಾರಿ , ಶರತ್ ಸುವರ್ಣ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!