ಪುತ್ತೂರು: ಮೇ.9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಮಂದಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗಿಯಾಗಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಅವರು ಮಾಧ್ಯಮದ ಜೊತೆ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದಲ್ಲೇ ಬಿಜೆಪಿಯನ್ನು ಬೆಳೆಸಿದರೆ, ಯಡಿಯೂರಪ್ಪ ಅವರು ದಕ್ಷಿಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕರ್ನಾಟಕದಿಂದ ಹೆಬ್ಬಾಗಿಲು ತೆರದ ಒಬ್ಬ ಧೀಮಂತ ವ್ಯಕ್ತಿ.
ರೈತಾಪಿ ವರ್ಗಕ್ಕೆ ಸ್ಪಂಧಿಸಿ ಎಲ್ಲಾ ವರ್ಗದ ನಾಯಕರಾಗಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ, 8 ಬಾರಿ ಶಾಸಕರಾಗಿ ಆಯ್ಕೆಗೊಂಡ ಅವರ 50 ವರ್ಷಗಳ ರಾಜಕೀಯ ಜೀವನದ ಪಯಣವನ್ನು ನೆನಪು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.
ಚಿತ್ರದುರ್ಗದಲ್ಲಿ ಈ ಕಾರ್ಯಕ್ರಮವು ಸುಮಾರು 120 ಎಕ್ರೆ ಜಾಗದಲ್ಲಿ ನಡೆಯಲಿದೆ. 12ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಹುಟ್ಟು ಹೋರಾಟಗಾರರಾದ ಯಡಿಯೂರಪ್ಪ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ್, ಬಿಜೆಪಿ ಅಧ್ಯಕ್ಷರಾಗಿ, ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಂಸದೀಯ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ ಯಡಿಯೂರಪ್ಪ ಅವರು ಕರ್ನಾಟಕ್ಕೆ ಹಲವು ಕೊಡುಗೆ ನೀಡಿದ್ದಾರೆ. ರೈತ ಪರ ಬಜೆಟ್ ಮಾಡಿ ರೈತರಿಗೆ ಸವಲತ್ತು ಕೊಟ್ಟ ಏಕೈಕ ಮುಖ್ಯಮಂತ್ರಿ ಯಡಿಯೂರಪ್ಪನವರು. ಅದರಲ್ಲೂ ಪುತ್ತೂರಿಗೆ ಕೋಟಿಚೆನ್ನಯ ಕೆಎಸ್ಆರ್ಟಿಸಿ ಬಸ್ನಿಲ್ದಾಣ, ಪುತ್ತೂರು ತಾಲೂಕು ಆಡಳಿತ ಸೌಧ, ಅಗ್ನಿಶಾಮಕ ದಳದ ಸ್ಟೇಷನ್ ಕಟ್ಟಡ, 115 ಕೋಟಿ ರೂಪಾಯಿಯ ಜಲಸಿರಿ ಯೋಜನೆ, ಬಹಗ್ರಾಮ ಕುಡಿಯುವ ನೀರಿಗೆ ಆದೇಶ ಸಹಿತ ಹಲವಾರು ಕೊಡುಗೆ ನೀಡಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಮೇ.8ರಂದು ರಾತ್ರಿ ಪುತ್ತೂರಿನಿಂದ ಬಸ್ ಮೂಲಕ ಸಾವಿರಾರು ಮಂದಿ ತೆರಳಲಿದ್ದಾರೆ. ಜೊತೆಗೆ ಅನೇಕ ಮಂದಿ ಸ್ವಂತ ವಾಹನದಲ್ಲೂ ತೆರಳಲಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಹರೀಶ್ ಬಿಜತ್ರೆ,ಬಿಜೆಪಿ ಫಲಾನುಭವಿ ಸಂಪರ್ಕ ಜಿಲ್ಲಾ ಸಂಯೋಜಕ ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಉಪಾಧ್ಯಕ್ಷೆ ವಸಂತಲಕ್ಷ್ಮೀ, ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.