ಮೋದಿ ಮಿತವ್ಯಯ ಕರೆಗೆ ಸ್ಪಂದನೆ: ಬಸ್‌ನಲ್ಲಿ ಪುತ್ತೂರಿಗೆ ಬಂದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆದ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೀಡಿರುವ ಮಿತವ್ಯಯ ಕರೆ ಪಾಲನೆ ಮಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಮೇ.14ರಂದು ಸಾರಿಗೆ ಬಸ್‌ನಲ್ಲಿ ಪುತ್ತೂರಿಗೆ ಆಗಮಿಸಿದರು.

ಪುತ್ತೂರು ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿರುವ ಮಣಿಕಂಠ ಅವರ ವಿವಾಹದ ಅತಿಥಿ ಸತ್ಕಾರಕ್ಕೆ ಆಗಮಿಸಿದ ಅವರು ಮಂಗಳೂರು ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಸಾರಿಗೆ ಬಸ್‌ನಲ್ಲಿ ಪದಾಧಿಕಾರಿಗಳು ಸಾಮೂಹಿಕವಾಗಿ ಪುತ್ತೂರಿಗೆ ಆಗಮಿಸಿದ್ದಾರೆ. ಬಸ್ ನಿಲ್ದಾಣದಿಂದ ಆಟೋ ರಿಕ್ಷಾದಲ್ಲಿ ಅತಿಥಿ ಸತ್ಕಾರ ನಡೆಯಲಿರುವ ಕಲ್ಯಾಣ ಮಂಟಪಕ್ಕೆ ತೆರಳಿ ಅಲ್ಲಿಂದ ಆಟೋ ರಿಕ್ಷಾದಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸಿ ನಂತರ ಬಸ್‌ನಲ್ಲಿ ಮಂಗಳೂರಿಗೆ ನಿರ್ಗಮಿಸಿದರು.

ಬಸ್‌ನಿಂದ ಇಳಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾಧ್ಯಮದವರೊಂದಿಗೆ ಮಾತನಾಡಿ, ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆದ ಯುದ್ದ ಕಾರಣದಿಂದಾಗಿ ವಿಶ್ವ ಮಾರುಕಟ್ಟೆಯಲ್ಲಿ ಉಂಟಾದ ಆರ್ಥಿಕ ಸಮಸ್ಯೆ ಅರಿತುಕೊಂಡು ದೇಶದಲ್ಲಿ ಜನತೆಗೆ ತೊಂದರೆ ಆಗದಂತೆ, ಆರ್ಥಿಕತೆಯನ್ನು ಸ್ಥಿರವಾಗಿಟ್ಟುಕೊಳ್ಳಲು ಹಾಗೂ ಮೇಲೇತರುವ ಉದ್ದೇಶದಿಂದ ಮೋದಿಯರು ದೇಶದ ಜನತೆಗೆ ಮಿತ ವ್ಯಯದ ಕರೆ ನೀಡಿದ್ದಾರೆ.

ಸ್ವತಃ ಪ್ರಧಾನಿಯವರೇ ತನ್ನ ಬೆಂಗಾವಲು ವಾಹನ ಕಡಿತಗೊಳಿಸಿದ್ದಾರೆ. ಪ್ರಧಾನಿಯವರ ಕರೆಗೆ ಸ್ಪಂಧನೆ ನೀಡುವ ಕಾರ್ಯವೂ ಜಿಲ್ಲಾ ಬಿಜೆಪಿಯಿಂದಲೂ ನಡೆದಿದೆ. ಪಕ್ಷದ ಸಭೆಗಳನ್ನು ವರ್ಚುವಲ್ ಆಗಿ ನಡೆಸಲಾಗುವುದು. ಮಂಡಲಗಳ ಸಭೆಗೆ ಗುಂಪು ಗುಂಪಾಗಿ ಒಂದೇ ವಾಹನದಲ್ಲಿ ಸಾಮೂಹಿಕವಾಗಿ ತೆರಳುವ ಮೂಲಕ ನಾವು ಅನುಷ್ಟಾನ ಮಾಡುವ ಮೂಲಕ ಆರ್ಥಿಕತೆಗೆ ಹೊಡೆತ ಬೀಳದಂತೆ ಪ್ರಧಾನಿಯವರ ಕೈ ಬಲಪಡಿಸಲಾಗುವುದು. ಪ್ರಧಾನಿಯವರ ಒಂದು ಕರೆಗೆ ದೇಶದ ಜನ ಅರ್ಥ ಮಾಡುಕೊಳ್ಳುವುದಾದರೆ ವಿರೋಧ ಪಕ್ಷದವರೂ ಯೋಚಿಸಬೇಕಾಗಿದೆ. ಈ ಹಿಂದೆ ಲಾಲ್ ಬಹದ್ದೂ‌ರ್ ಶಾಸ್ತ್ರೀ, ಇಂದಿರಾಗಾಂಧೀಯವರೂ ದೇಶದಲ್ಲಿ ಕಷ್ಟ ಬಂದಾಗ ಈ ರೀತಿ ಕರೆಗಳನ್ನು ಅನೇಕ ಬಾರಿ ನೀಡಿದ್ದು ದೇಶದ ಜನ ಪಕ್ಷಾತೀತವಾಗಿ ಪಾಲನೆ ಮಾಡಿದ್ದರು ಎಂದು ಅವರು ಹೇಳಿದರು.

ಬಸ್‌ನಲ್ಲಿ ಆಗಮಿಸಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಪದಾಧಿಕಾರಿಗಳನ್ನು ಪುತ್ತೂರು ಬಿಜೆಪಿಯಿಂದ ಪುತ್ತೂರು ಬಸ್ ನಿಲ್ದಾಣದಲ್ಲಿ ಸ್ವಾಗತಿಸಿದರು.

ನಗರ ಮಂಡಲದ ಅಧ್ಯಕ್ಷ ಶಿವಕುಮಾ‌ರ್ ಕಲ್ಲಿಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾ‌ರ್ ಮಾರ್ತ, ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾ‌ರ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಗ್ರಾಮಾಂತರ ಮಂಡಲ ಬಿಜೆಪಿ ಉಪಾಧ್ಯಕ್ಷ ವಿದ್ಯಾಧರ ಜೈನ್, ಉಪಾಧ್ಯಕ್ಷ ಸತೀಶ್‌ ನ್ಯಾಕ್ ಪರ್ಲಡ್ಕ,ನಿರಂಜನ್ ಮಾನ್ಯ, ಅಭಿಜಿತ್ ಕೊಳಕ್ಕಿಮಾರ್, ಮಹಿಳಾ ಮೋರ್ಚಾದ ಜಯಲಕ್ಷ್ಮೀ ಶಗ್ರಿತ್ತಾಯ ಸಹಿತ ಹಲವು ಮಂದಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!