ಮಂಜೇಶ್ವರ: ರಾಜ್ಯ ಸರ್ಕಾರದ ಕಿಫ್ಬಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಂಜೇಶ್ವರ ಗೋವಿಂದ ಪೈ – ಕೆದಂಬಾಡಿ ರಸ್ತೆ ಕಾಮಗಾರಿ ಮುಗಿದ ಬೆನ್ನಲ್ಲೇ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. 2027ರ ತನಕ ರಸ್ತೆಯ ನಿರ್ವಹಣಾ ವಾರಂಟಿ ಅವಧಿ ಇದ್ದರೂ, ಗುತ್ತಿಗೆದಾರನ ಬೇಜವಾಬ್ದಾರಿತನ ಹಾಗೂ ಅಧಿಕಾರಿಗಳ ಮೌನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಿಫ್ಬಿ ಫಂಡ್‌ನಿಂದ ಮಂಜೂರಾದ 5 ಕೋಟಿ 24 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆಯ ಕಾಮಗಾರಿಯು 2024ರಲ್ಲಿ ಪೂರ್ಣಗೊಂಡಿತ್ತು. ನಿಯಮದಂತೆ ಸತತ ಮೂರು ವರ್ಷಗಳ ಕಾಲ ರಸ್ತೆಯ ಇಕ್ಕೆಲಗಳಿಗೆ ಮಣ್ಣು ಹಾಕಿ ನಿರ್ವಹಣೆ ಮಾಡುವುದು ಗುತ್ತಿಗೆದಾರನ ಜವಾಬ್ದಾರಿಯಾಗಿದೆ. ಆದರೆ ಕಾಮಗಾರಿ ಮುಗಿದ ನಂತರ ಗುತ್ತಿಗೆದಾರ ಇತ್ತ ತಿರುಗಿಯೂ ನೋಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡ ಜಾಣ ನಿದ್ರೆಗೆ ಜಾರಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಸ್ತೆಯ ಎರಡೂ ಬದಿಗಳಲ್ಲಿ ಭಾರೀ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನಗಳು ರಸ್ತೆ ಬದಿಗೆ ಇಳಿಯುವಾಗ ಗುಂಡಿಗೆ ಬಿದ್ದು ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದರೊಂದಿಗೆ ಚರಂಡಿಗಳು ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದು ರಸ್ತೆಯ ಆಯಸ್ಸನ್ನು ಮತ್ತಷ್ಟು ಕುಗ್ಗಿಸುತ್ತಿದೆ.
ರಸ್ತೆ ಬದಿಯ ಕೆಲವು ನಿವಾಸಿಗಳು ಚರಂಡಿಯ ಅಡಿಭಾಗಕ್ಕೆ ಪೈಪ್ ಅಳವಡಿಸದೆ ಮಣ್ಣು ಹಾಕಿ ಮುಚ್ಚಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದಾಗಿ ಮಳೆನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಯು ಕೆರೆಯಂತಾಗುತ್ತಿದೆ.
ಈ ರಸ್ತೆಯನ್ನು 5.5 ಮೀಟರ್ ಅಗಲದಲ್ಲಿ ನಿರ್ಮಿಸಬೇಕೆಂಬ ನಿಯಮವಿದ್ದರೂ, ಗುತ್ತಿಗೆದಾರ ಕೇವಲ 3.70 ಮೀಟರ್ ಅಗಲಕ್ಕೆ ಮಾತ್ರ ಸೀಮಿತಗೊಳಿಸಿ ಕಾಮಗಾರಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡು ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬುವುದು ಊರವರ ದೂರು.
ಮಳೆಗಾಲವು ಅತಿ ಸಮೀಪದಲ್ಲಿದ್ದು, ರಸ್ತೆಯ ಪರಿಸ್ಥಿತಿ ಮತ್ತಷ್ಟು ಹದಗೆಡುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಗುತ್ತಿಗೆದಾರನಿಂದ ಕೂಡಲೇ ದುರಸ್ತಿ ಕಾರ್ಯ ಮಾಡಿಸಿ, ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.