ಮಂಗಳೂರು: ರಾಜ್ಯ ಸರ್ಕಾರ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವ ಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ತೀವ್ರ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ನಿರ್ಧಾರ ಶಿಕ್ಷಣ ಕ್ಷೇತ್ರದಲ್ಲಿ ಗೊಂದಲ ಹಾಗೂ ವಿಭಜನೆಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, “ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ಮೂಲಕ ರಾಜ್ಯ ಸರ್ಕಾರ ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಇದು ಕಾಂಗ್ರೆಸ್ನ ಮುಸ್ಲಿಂ ತುಷ್ಠೀಕರಣದ ಪರಮಾವಧಿ ಹಾಗೂ ನ್ಯಾಯಾಲಯದ ಆದೇಶದ ಉಲ್ಲಂಘನೆ” ಎಂದು ಟೀಕಿಸಿದರು.
ರಾಜಕೀಯಗಳನ್ನು ಮುಚ್ಚಿಹಾಕಲು ಶಿಕ್ಷಣ ಕ್ಷೇತ್ರವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು, “ಶಿಕ್ಷಣ ಸಚಿವರು ದಿಕ್ಕುತೋಚದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸರ್ಕಾರ ತಕ್ಷಣ ಹಿಜಾಬ್ ಕುರಿತ ಆದೇಶವನ್ನು ಹಿಂಪಡೆಯಬೇಕು” ಎಂದು ಹೇಳಿದರು.
ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, “ಮಕ್ಕಳಲ್ಲಿ ಸಮಾನತೆ ಮೂಡಿಸಬೇಕಾದ ಶಾಲಾ-ಕಾಲೇಜುಗಳಲ್ಲಿ ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣದ ಮೂಲಕ ಭಿನ್ನಾಭಿಪ್ರಾಯ ಮೂಡಿಸಿದೆ. ಬಿತ್ತುತ್ತಿದೆ” ಎಂದು ಕಿಡಿಕಾರಿದರು.
ಹಿಂದಿನ ಬಿಜೆಪಿ ಸರ್ಕಾರದ ವಿದ್ಯಾರ್ಥಿಗಳಲ್ಲಿ ಜಾತಿ-ಮತ ಭೇದ ತೊಡೆದುಹಾಕುವ ಉದ್ದೇಶದಿಂದ ಕಟ್ಟುನಿಟ್ಟಿನ ಸಮವಸ್ತ್ರ ನಿಯಮ ಜಾರಿಯಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಹಿಂಪಡೆದು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ ಎಂದು ಅವರು ಆರೋಪಿಸಿದರು.
ಹಿಜಾಬ್ ವಿವಾದ ಇನ್ನೂ ಬಾಕಿ ಇರುವಾಗಲೇ ಸರ್ಕಾರ ನಿಷೇಧ ಹಿಂಪಡೆದಿರುವುದು ನ್ಯಾಯಾಂಗ ವ್ಯವಸ್ಥೆಗೆ ಅವಮಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಶಾಸಕ ವೇದವ್ಯಾಸ್ ಕಾಮತ್ ಸಹ ಸರ್ಕಾರದ ಕ್ರಮವನ್ನು ಖಂಡಿಸಿ, “ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನತೆ ಹಾಗೂ ಏಕತೆ ತರುವ ಉದ್ದೇಶದಿಂದ ಜಾರಿಗೊಳಿಸಿದ್ದ ಸಮವಸ್ತ್ರ ನಿಯಮವನ್ನು ಹಿಂಪಡೆದು ಶಿಕ್ಷಣದ ವಾತಾವರಣ ಹಾಳುಗೆಡವಲಾಗುತ್ತಿದೆ” ಎಂದು ಆರೋಪಿಸಿದರು.
“ಸಮವಸ್ತ್ರದ ಮೂಲ ಉದ್ದೇಶವೇ ವಿದ್ಯಾರ್ಥಿಗಳಲ್ಲಿ ಜಾತಿ-ಮತ ಭೇದ ಮರೆಸಿ ಸಮಾನತೆಯ ಭಾವ ಮೂಡಿಸುವುದು. ಆದರೆ ಸರ್ಕಾರವೇ ಓಲೈಕೆ ರಾಜಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತಿದೆ” ಎಂದು ಅವರು ಟೀಕಿಸಿದರು.
ಶಿಕ್ಷಕರ ಕೊರತೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು ಸರ್ಕಾರ ವಿದ್ಯಾರ್ಥಿಗಳಲ್ಲಿ ಪ್ರತ್ಯೇಕತೆಯನ್ನು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.