ನರಹರಿ–ಕೃಷ್ಣಕೋಡಿ ಸಂಪರ್ಕ ಕಡಿತ: 150ಕ್ಕೂ ಹೆಚ್ಚು ಕುಟುಂಬಗಳಿಗೆ ತೊಂದರೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಬಂದ್ ಆಗಿರುವ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಮಾಡುವಂತೆ ಹಾಗೂ ಕೆಡವಿ ಹಾಕಲಾದ ಬಸ್ ನಿಲ್ದಾಣವನ್ನು ಮರುಸ್ಥಾಪಿಸಿಕೊಡುವಂತೆ ನರಹರಿ ಭಾಗದ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಬಿಸಿರೋಡು- ಅಡ್ಡಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿ 75 ರ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ ಕಲ್ಲಡ್ಕ ಸಮೀಪದ ಗೋಳ್ತಮಜಲು ಗ್ರಾ.ಪಂ‌.ವ್ಯಾಪ್ತಿಯ ನರಹರಿ ನಗರ ಮತ್ತು ಕೃಷ್ಣಕೋಡಿ ಎಂಬಲ್ಲಿ ಒಟ್ಟು ಮೂರು ರಸ್ತೆಗಳ ಸಂಪರ್ಕವನ್ನು ಕಡಿದು ಹಾಕಲಾಗಿತ್ತು. ಹಾಗಾಗಿ ಕಳೆದ ಮೂರು ವರ್ಷಗಳಿಂದ ಈ ಭಾಗದ ಸಾರ್ವಜನಿಕರು ಸಂಚರಿಸಲು ಸಾಕಷ್ಟು ಕಷ್ಟಕರವಾಗಿತ್ತು. ಕೇವಲ ಮೂವತ್ತರಿಂದ ನಲವತ್ತು ಮೀವರೆಗೆ ಕಾಂಕ್ರೀಟ್ ಮಾಡಿದರೆ ರಸ್ತೆ ದುರಸ್ತಿಯಾಗಿ ಸಂಚಾರ ಸುಗಮವಾಗಿ ಸಾಗುತ್ತದೆ. ಇದೀಗ ಕಲ್ಲಡ್ಕ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆ ನಿರ್ಮಾಣದ ಬಹುತೇಕ ಕಾಮಗಾರಿ ಮುಗಿದಿದ್ದು, ಸಂಪರ್ಕ ರಸ್ತೆಗೆ ಕಾಂಕ್ರೀಟ್ ಮಾಡಿಕೊಡುವಂತೆ ಸ್ಥಳೀಯ ಶಾಸಕರಿಗೆ,ಸಂಸದರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಗೋಳ್ತಮಜಲು ಗ್ರಾಮದ ನರಹರಿ ನಗರ ಕೋದಂಡರಾಮ ಮಂದಿರ ರಸ್ತೆಯಲ್ಲಿ ಸುಮಾರು 40ರಷ್ಟು ಮನೆಗಳಿದ್ದು, ಪರಿಶಿಷ್ಟ ಪಂಗಡದ ಮನೆಗಳು ಕೂಡ ಈ ರಸ್ತೆಯನ್ನೇ ಅವಲಂಬಿಸಿರುತ್ತದೆ. ಅದೇ ರೀತಿ ಗೋಳ್ತಮಜಲು ಗ್ರಾಮದ ನರಹರಿ ನಗರ ರಸ್ತೆಯಲ್ಲಿ ಸುಮಾರು 90 ಕುಟುಂಬಗಳು ಈ ರಸ್ತೆಯನ್ನು ಅವಲಂಬಿಸಿರುತ್ತದೆ. ಗೋಳ್ತಮಜಲು ಗ್ರಾಮದ ಕೃಷ್ಣಕೋಡಿ ಮತ್ತು ಬಿ.ಕೆ.ನಗರ ಎಂಬಲ್ಲಿಯ ರಸ್ತೆಯಲ್ಲಿ ಸುಮಾರು 60 ಮನೆಗಳಿದ್ದು, 20 ಅಲ್ಪಸಂಖ್ಯಾತ ಕುಟುಂಬಗಳಿರುತ್ತದೆ. ಮತ್ತು ಭಜನಾ ಮಂದಿರ ಕುಟುಂಬವೊಂದರ ತರವಾಡು ಮನೆ ಕೂಡ ಇದೆ.
ಇದರ ಜೊತೆ ಇಲ್ಲಿ ರಸ್ತೆಯ ಎರಡು ಬದಿಯಲ್ಲಿ ಇದ್ದ ಬಸ್ ನಿಲ್ದಾಣಗಳನ್ನು ಕೂಡ ಕೆಡವಿ ಹಾಕಿದ್ದಾರೆ. ರಸ್ತೆ ನಿರ್ಮಾಣವಾದ ಬಳಿಕ ಬಸ್ ನಿಲ್ದಾಣವನ್ನು ಪುನರ್ ನಿರ್ಮಿಸಿಕೊಡುವ ವಿಶ್ವಾಸಹೊಂದಿದ್ದ ಇಲ್ಲಿನ ಜನರ ನಂಬಿಕೆ ಹುಸಿಯಾಗಿದೆ.


ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಬಸ್ ನಿಲ್ದಾಣ ಹಾಗೂ ಸಂಪರ್ಕ ರಸ್ತೆಗೆ ಅವಕಾಶ ಇಲ್ಲ ಎಂಬ ನೇರ ಮಾತುಗಳ‌ ಮೂಲಕ ಬೇಸರ ಮೂಡಿಸಿದ್ದಾರೆ.
ಮಳೆಗಾಲ ಆರಂಭಗೊಳ್ಳುವ ಮೊದಲು ಮತ್ತು ಶಾಲಾ ಮಕ್ಕಳಿಗೆ ಶಾಲಾರಂಭಗೂ ಮುನ್ನವೇ ಸಂಚಾರಕ್ಕೆ ಆಯೋಗ್ಯವಾಗಿರುವ ರಸ್ತೆಗೆ ಸಂಪರ್ಕವನ್ನು ಮಾಡುವಂತೆ ಮತ್ತು ಮಳೆಗಾಲದಲ್ಲಿ ಮಳೆಯಿಂದ ಹಾಗೂ ಬೇಸಿಗೆ ಕಾಲದಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ಬಸ್ ಸೆಲ್ಟರ್ ಹಾಕಿ ಕೊಡಿ ಎಂಬ ಮನವಿಯನ್ನು ಈ ಭಾಗದ ಜನತೆ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!