ಪುತ್ತೂರು ಬಿಜೆಪಿಯ ಪ್ರತಿಭಟನೆ ಮೂರ್ಖತನದ್ದು-ಕಾಂಗ್ರೆಸ್

ವಿಟ್ಲ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಜನಪ್ರಿಯತೆಯನ್ನು ಸಹಿಸದೇ ದಲಿತ ಸಂಘಟನೆಯ ಹೆಸರಿನಲ್ಲಿ ಹಲವರಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಮಾಡಿದ ಪ್ರತಿಭಟನೆ ಮೂರ್ಖತನದ್ದಾಗಿದೆ ಎಂದು ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಧ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು.ಶುಕ್ರವಾರ ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರನ್ನು ನಿಂದಿಸುವ ಭರದಲ್ಲಿ ಅವಾಚ್ಯ ಪದಗಳನ್ನೂ ಬಳಕೆ ಮಾಡಿರುವುದು ತಪ್ಪು ಎಂದರು.


ಪುಣಚ ಗ್ರಾಮಕ್ಕೆ ಕಳೆದ ಮೂರು ವರ್ಷಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶಾಸಕರು ಕೋಟಿಗಟ್ಟಲೆ ಅನುದಾನ ಒದಗಿಸಿದ್ದಾರೆ. ಬಿಜೆಪಿ ಶಾಸಕರು ಇರುವ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಎಷ್ಟು ಅಕ್ರಮ ಸಕ್ರಮ, ಹಕ್ಕುಪತ್ರ ವಿಲೇವಾರಿ ಬಗ್ಗೆ ಸಿಟ್ಟಿಂಗ್, ಬೈಠಕ್ ಗಳು ನಡೆದಿವೆ ಅಥವಾ ನಡೆಯುತ್ತಿವೆ. ಹಕ್ಕುಪತ್ರ ಕೇಳಿ ಪ್ರತಿಭಟನೆಗೆ ಕುಳಿತ ಬೇಬಿ, ಪ್ರೇಮಾ ಮತ್ತು ವಿಜಯಲಕ್ಷ್ಮೀ ಅವರ ಸಂಬಂಧಿಕರಾದ ಚಂದ್ರ ಮತ್ತು ಸತೀಶ್ ಅವರಿಗೆ ಶಾಸಕರು ತಮ್ಮ ಟ್ರಸ್ಟ್ ಮೂಲಕ ಮನೆ ನಿರ್ಮಾಣಕ್ಕೆ ಸಿಮೆಂಟ್ ಶೀಟ್ ನೀಡಿ ವೈಯಕ್ತಿಕ ಸಹಾಯ ಕೂಡ ಮಾಡಿದ್ದಾರೆ. ಹಿರಿಯ ನಾಯಕರನ್ನು ಓಲೈಸಿ ರಾಜಕೀಯ ಸ್ಥಾನಮಾನ ಗಟ್ಟಿಗೊಳಿಸುವ ದೃಷ್ಟಿಯಿಂದ ವಿಕಾಸ ಪುತ್ತೂರು ಎಂಬವರು‌ ಹಕ್ಕು ಪತ್ರ ನಿರಾಕರಣೆ ಮಾಡಲು ಜಾಗ ಶಾಸಕರ ಅಪ್ಪನ ಆಸ್ತಿಯಾ ಎಂದು ಕೇಳಿದ್ದಾರೆ. ಕೊಳಕು ಪದಗಳ ಬಳಕೆ ಬಿಜೆಪಿಯ ಚಾಳಿ. ಅಂತಹದೇ ಪದಗಳನ್ನು ಕಾಂಗ್ರೆಸ್ ಬಳಸಲು ಹೋಗುವುದಿಲ್ಲ ಕಾಂಗ್ರೆಸ್ ಪಕ್ಷ ಅವರಷ್ಟು ಕೀಳುಮಟ್ಟಕ್ಕೆ ಇಳಿಯುವುದಿಲ್ಲ ಎಂದರು. ಈಗಾಗಲೇ ಮುಂಬರುವ ವಿಧಾನ ಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳಿದ್ದು ಆ ಪಟ್ಟಿಯಲ್ಲಿ ತಮ್ಮ ಹೆಸರೂ ಸೇರ್ಪಡೆ ಆಗಲಿ ಎಂಬ ಉದ್ದೇಶ ವಿಕಾಸ ಪುತ್ತೂರು ಅವರಿಗೆ ಇರಬಹುದು ಎಂದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎಸ್. ಮಹಮ್ಮದ್ ಮಾತನಾಡಿ ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಲೋಕಸಭಾ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಎಂದು ಹೇಳಿರುವುದು ಖಂಡನೀಯ. ದಲಿತರಿಗೆ ಕಾಂಗ್ರೆಸ್ ನೀಡಿದಷ್ಟು ಸೌಲಭ್ಯಗಳನ್ನು ಬಿಜೆಪಿ ನೀಡಿದೆಯಾ ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಮತ್ತು ಮಹಾಲಿಂಗ ನಾಯ್ಕ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!