ಪುತ್ತೂರು: ಪುತ್ತೂರಿನಲ್ಲಿ ಶಾಸಕರ ನೇತೃತ್ವದಲ್ಲಿ ದಾಖಲೆ ಸಂಖ್ಯೆಯ ಅಕ್ರಮ-ಸಕ್ರಮ ಮಂಜೂರು, 94ಸಿ, ಸಿಸಿ ಹಕ್ಕುಪತ್ರ ವಿತರಣೆಯ ಕಾರ್ಯ ನಡೆಯುತ್ತಿದ್ದು, ಅದನ್ನು ಸಹಿಸದ ಬಿಜೆಪಿಯು ಪುಣಚದ ಪರಿಶಿಷ್ಟ ಪಂಗಡದ 3 ಕುಟುಂಬಗಳ ಹಕ್ಕುಪತ್ರದ ವಿಚಾರದಲ್ಲಿ ಕೀಳುಮಟ್ಟದ ರಾಜಕೀಯ ಪ್ರದರ್ಶಿಸಿ ಪ್ರತಿಭಟನೆಯ ನಾಟಕ ಮಾಡಿದೆ ಎಂದು ಪುತ್ತೂರು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪುತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಬಡವರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿದ್ದು, ಬರೀ ತಾಲೂಕು ಕಚೇರಿಯಲ್ಲಿ ನಡೆಯುತ್ತಿದ್ದ ಅಕ್ರಮ-ಸಕ್ರಮ ಬೈಠಕನ್ನು ಗ್ರಾಮಗಳಿಗೆ ಕೊಂಡುಹೋಗುವ ಕಾರ್ಯ ಮಾಡಿದ್ದು, ಈಗಾಗಲೇ 24 ಗ್ರಾಮಗಳನ್ನು ತಲುಪಿ 1600 ಅಕ್ರಮ-ಸಕ್ರಮ ಕಡತ ಮಂಜೂರು ಮಾಡಲಾಗಿದ್ದು, ಜತೆಗೆ 1500ರಷ್ಟು 94ಸಿ, ಸಿಸಿ ಹಕ್ಕುಪತ್ರ ವಿತರಿಸಲಾಗಿದೆ.
ಆದರೆ ಬಿಜೆಪಿ ಶಾಸಕರ ಅವಧಿಯಲ್ಲಿ 5 ವರ್ಷಗಳಲ್ಲಿ ಸುಮಾರು ಅಕ್ರಮ-ಸಕ್ರಮ ಬೈಠಕನ್ನು ಮಾಡಿ 200ರಷ್ಟು ಕಡತ ಮಂಜೂರು ಮಾಡಿರಬಹುದು. ಪುಣಚದ ಕುಟುಂಬಗಳಿಗೆ 8 ವರ್ಷದಲ್ಲಿ ಹಕ್ಕುಪತ್ರ ನೀಡಿಲ್ಲ ಎಂದು ಬಿಜೆಪಿ ಆರೋಪಿಸಿದ್ದು, ಕಳೆದ ಅವಧಿಯ 5 ವರ್ಷದಲ್ಲಿ ಇವರು ಯಾಕೆ ಕೊಟ್ಟಿಲ್ಲ ಎಂಬುದನ್ನು ತಿಳಿಸಲಿ. ಆ ಭಾಗದಲ್ಲಿ ಹಕ್ಕುಪತ್ರಗಳ ವಿತರಣೆ ಶಾಸಕರು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದು, ಆದರೆ ಬಂಟ್ವಾಳ ತಹಶೀಲ್ದಾರ್ ದಿನಾಂಕ ನೀಡದೆ ಕೊಂಚ ವಿಳಂಬವಾಗಿತ್ತು. ಕೊನೆಗೆ ಮೇ 26ಕ್ಕೆ ಪೆರ್ನೆಯಲ್ಲಿ ಅಕ್ರಮ-ಸಕ್ರಮ ಸಿಟ್ಟಿಂಗ್ ಮಾಡುವುದಕ್ಕೆ ದಿನಾಂಕ ನೀಡಿದ್ದಾರೆ.
ಪುತ್ತೂರಿನಲ್ಲಿ ಇಷ್ಟೆಲ್ಲಾ ಸಿಟ್ಟಿಂಗ್ ನಡೆದರೂ ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲಿ ಸಿಟ್ಟಿಂಗ್ ನಡೆಸಿ ಎಷ್ಟು ಹಕ್ಕುಪತ್ರ ವಿತರಣೆಯಾಗಿದೆ ಎಂಬುದನ್ನು ತಿಳಿಸಬೇಕಿದ್ದು, ಅದರ ವಿರುದ್ಧ ಪ್ರತಿಭಟನೆ ಮಾಡಲಿ. ಬಿಜೆಪಿಯ ಒಬ್ಬ ನಾಯಕ ಶಾಸಕರ ಅಪ್ಪನದ್ದಾ ಎಂಬ ಪದ ಬಳಕೆ ಮಾಡಿದ್ದು, ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಏರಿಸಿದ ಕೇಂದ್ರದ ಸರಕಾರದ ವಿರುದ್ಧ ಅಂತಹ ಪದ ಬಳಕೆ ಮಾಡಲಿ. ಕೇಂದ್ರದ ಆಮದು ನೀತಿಯ ಪರಿಣಾಮದಿಂದ ಅಡಿಕೆ, ತೆಂಗಿನ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾಗಿದ್ದು, ಅದರ ವಿರುದ್ಧ ಪ್ರತಿಭಟನೆ ಮಾಡಲಿ ಎಂದರು.
ಪ್ರಸ್ತುತ ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಯ ಫಲವಾಗಿ ಜನ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಪುತ್ತೂರಿನಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಶೂನ್ಯವಾಗಿದ್ದು, ಇಲ್ಲಿನ ಒಬ್ಬ ಹೆಣ್ಣು ಮಗಳಿಗೆ ಅನ್ಯಾಯವಾದಾಗ ಬಿಜೆಪಿ ಎಷ್ಟು ಪ್ರತಿಭಟನೆ ಮಾಡಿದೆ. ಶಾಸಕರ ಇಚ್ಚಾಶಕ್ತಿಯ ಕಾರಣಕ್ಕೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಸೇರಿದಂತೆ ಹತ್ತಾರು ಹೊಸ ಯೋಜನೆಗಳು ಬಂದಿದೆಯೇ ಹೊರತು ಇವರ ಜುಜುಬಿ ಪ್ರತಿಭಟನೆಯಿಂದ ಬಂದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್ ಉಪಸ್ಥಿತರಿದ್ದರು.