ಉಡುಪಿ: ಭಟ್ಕಳದಲ್ಲಿ ಸಂಭವಿಸಿದ ಕಪ್ಪೆಚಿಪ್ಪು ದುರಂತದಿಂದ ಪಾರಾದ ಮಹಾದೇವಿ ನಾಯ್ಕ್ ಅವರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಾಯಿಯ ಆರೈಕೆಯಲ್ಲಿ ತೊಡಗಿರುವ ಪುತ್ರಿ ಶೋಭ, ದುರಂತದ ಕುರಿತು ಭಾವುಕರಾಗಿ ಮಾತನಾಡಿ, “ಕಪ್ಪೆಚಿಪ್ಪು ಆರಿಸಲು ಹೋಗ್ತೇನೆ, ನೀನು ಮನೆಗೆ ಬಾ ಎಂದು ಅಮ್ಮ ಕರೆದಿದ್ದರು. ಆದರೆ ನಾನು ಮನೆಗೆ ಬರುವಷ್ಟರಲ್ಲಿ ದುರಂತ ಸಂಭವಿಸಿತ್ತು” ಎಂದು ಕಣ್ಣೀರಿಟ್ಟರು.
“ನಮ್ಮ ಕುಟುಂಬದವರನ್ನು ಕಳೆದುಕೊಂಡ ನೋವನ್ನು ಸಹಿಸಲು ಆಗುತ್ತಿಲ್ಲ. ನನ್ನ ತಾಯಿ ಸೇರಿ ಇಬ್ಬರು ಮಾತ್ರ ಬದುಕುಳಿದಿದ್ದಾರೆ. ನನ್ನ ತಾಯಿಯನ್ನು ದೇವರೇ ರಕ್ಷಿಸಿದ್ದಾರೆ” ಎಂದು ಅವರು ಹೇಳಿದರು.
ಕಪ್ಪೆಚಿಪ್ಪು ಸಂಗ್ರಹಿಸುವ ಕೆಲಸದಲ್ಲಿ ಮಹಾದೇವಿ ನಾಯ್ಕ್ ಅವರಿಗೆ ಅಪಾರ ಅನುಭವವಿದ್ದು, 14 ಜನರ ತಂಡದಲ್ಲಿ ಅವರೇ ಹೆಚ್ಚು ವಯಸ್ಸಿನವರಾಗಿದ್ದರು. “ಅವರು ಬದುಕಿ ಬಂದಿರುವುದು ಪವಾಡವೇ ಸರಿ” ಎಂದು ಶೋಭ ಹೇಳಿದರು.
“14 ಜನರಲ್ಲಿ 13 ಜನ ನಮ್ಮ ಕುಟುಂಬದವರೇ ಆಗಿದ್ದರು. ನಮ್ಮ ಕುಟುಂಬದ 10 ಮಂದಿಯನ್ನು ಕಳೆದುಕೊಂಡಿದ್ದೇವೆ. ಪರಿಸರದ ಮತ್ತೊಬ್ಬ ವ್ಯಕ್ತಿಯೂ ಸಾವನ್ನಪ್ಪಿದ್ದಾರೆ” ಎಂದು ಅವರು ತಿಳಿಸಿದರು.
ಈ ದುರಂತದಿಂದ ಹಲವಾರು ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದು, ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದೆ. “ತಾಯಿಯನ್ನು ಕಳೆದುಕೊಂಡ ಆ ಮಕ್ಕಳನ್ನು ನೋಡುವುದೇ ತುಂಬಾ ನೋವಾಗುತ್ತಿದೆ. ಇಷ್ಟು ಕಷ್ಟ ನಮ್ಮ ಜೀವನಕ್ಕೆ ಯಾಕೆ ಬಂದಿದೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ಶೋಭ ಭಾವುಕರಾಗಿ ಹೇಳಿದರು.