ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಮುಕ್ಕ ಚೆಕ್ಪೋಸ್ಟ್ ಸಮೀಪದ ಖಂಡಿಗೆ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಬಾಗಲಕೋಟೆ ಮೂಲದ, ಸದ್ಯ ಕಾವೂರು ಪಂಜಿಮೊಗರುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಭೀಮಾ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಅವರ ಸಹೋದ್ಯೋಗಿಗಳಾದ ಸಂಗಮೇಶ ಮತ್ತು ಮಂಜುನಾಥ ಎಂದು ತಿಳಿದುಬಂದಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೀಮಾ ಹಾಗೂ ಇಬ್ಬರು ಸಹೋದ್ಯೋಗಿಗಳು ಕೆಲಸ ಮುಗಿಸಿಕೊಂಡು ಒಂದೇ ಬೈಕ್ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಕಾವೂರು ಪಂಜಿಮೊಗರಿನ ತಮ್ಮ ನಿವಾಸಗಳಿಗೆ ತೆರಳುತ್ತಿದ್ದರು. ಈ ವೇಳೆ ಭಾರೀ ಲೋಡ್ ಹೊತ್ತಿದ್ದ ಲಾರಿಯನ್ನು ಎಡಭಾಗದಿಂದ ಓವರ್ಟೇಕ್ ಮಾಡಲು ಯತ್ನಿಸಿದಾಗ ಬೈಕ್ಗೆ ಲಾರಿ ಅಲ್ಪ ಪ್ರಮಾಣದಲ್ಲಿ ತಾಗಿದೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು, ಈ ವೇಳೆ ಭೀಮಾ ಅವರ ತಲೆಯ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.