ರಾಜ್ಯಸಭೆ ಚುನಾವಣೆ ಚರ್ಚೆಗೆ ಸಿಎಂ ದೆಹಲಿಗೆ: ಈಶ್ವರ ಖಂಡ್ರೆ

ಕುಕ್ಕೆ ಸುಬ್ರಹ್ಮಣ್ಯ,: ಮುಂಬರುವ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ವರಿಷ್ಠರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ದೆಹಲಿಗೆ ತೆರಳಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ಪರಮಾಧಿಕಾರವಾಗಿದ್ದು, ಊಹಾತ್ಮಕ ರಾಜಕೀಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಕ್ಕೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆಗೆ ಚೆಕ್‌ಪೋಸ್ಟ್

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ನಾಲ್ಕು ಪ್ರವೇಶ ಮಾರ್ಗಗಳಲ್ಲೂ ಏಕಬಳಕೆ ಪ್ಲಾಸ್ಟಿಕ್ ತಪಾಸಣೆಗಾಗಿ ಚೆಕ್‌ಪೋಸ್ಟ್ ಸ್ಥಾಪಿಸಲು ಆದೇಶ ನೀಡಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.

ತಾವು ದೇವಸ್ಥಾನಕ್ಕೆ ಆಗಮಿಸುವ ವೇಳೆ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ಬಾಟಲಿ, ತಟ್ಟೆ ಸೇರಿದಂತೆ ತ್ಯಾಜ್ಯ ವಸ್ತುಗಳು ಬಿದ್ದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಎರಡು ಹಂತದ ತಪಾಸಣಾ ವ್ಯವಸ್ಥೆ ಜಾರಿಗೆ ತರಲು ಸೂಚಿಸಲಾಗಿದೆ ಎಂದು ಹೇಳಿದರು.

ಡೀಮ್ಡ್ ಅರಣ್ಯ ಸಮಸ್ಯೆಗೆ ಜಂಟಿ ಸರ್ವೆ

ರಾಜ್ಯದಲ್ಲಿ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿದ್ದು, 2022ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ 3.33 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಅರಣ್ಯ ಎಂದು ಉಲ್ಲೇಖಿಸಲಾಗಿದೆ. ಆದರೆ ಆ ವ್ಯಾಪ್ತಿಯಲ್ಲಿ ಅಂಗನವಾಡಿ, ಸರ್ಕಾರಿ ಆಸ್ಪತ್ರೆ ಹಾಗೂ ಪಟ್ಟಾ ಭೂಮಿಗಳೂ ಸೇರಿರುವ ಹಿನ್ನೆಲೆ ಸಮಸ್ಯೆ ಪರಿಹಾರಕ್ಕಾಗಿ ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಕಂದಾಯ ಇಲಾಖೆಯ ಮೋಜಣಿದಾರರು ಮುಷ್ಕರದಲ್ಲಿರುವುದು ಹಾಗೂ ಸರ್ವೆಯರ್‌ಗಳ ಕೊರತೆಯಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಅರಣ್ಯ ಜಂಟಿ ಸರ್ವೆಗೆ ವಿಶೇಷ ಸಿಬ್ಬಂದಿ ನಿಯೋಜನೆ ಕುರಿತು ಕಂದಾಯ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ

ಮಾನವ ಜೀವ ಅತ್ಯಂತ ಅಮೂಲ್ಯವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.ವನ್ಯಜೀವಿಗಳ ಸಂಚಾರದ ಮೇಲ್ವಿಚಾರಣೆಗೆ ಡ್ರೋನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದ್ದು, ಕಮಾಂಡ್ ಸೆಂಟರ್ ಕೂಡ ಆರಂಭಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ, ಚಿರತೆ ಸಮಸ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚುವರಿ ಬೋನು ಅಳವಡಿಕೆ, ಆನೆಗಳ ನುಗ್ಗುವಿಕೆ ತಡೆಯಲು ಕಂದಕ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಸೌರ ತಂತಿ ಬೇಲಿ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆಕುಮಾರಧಾರಾ ನದಿಗೆ ಸಂಸ್ಕರಿಸದ ತ್ಯಾಜ್ಯ ನೀರು ಹರಿಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ಜಲ ಸಂಸ್ಕರಣಾ ಘಟಕಗಳ ಕಾರ್ಯಪದ್ಧತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಮೊದಲ ಬಾರಿ ತಪ್ಪು ಕಂಡುಬಂದರೆ ಎಚ್ಚರಿಕೆ ನೀಡಬೇಕು. ಅದೇ ತಪ್ಪು ಮರುಕಳಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಈಶ್ವರ ಖಂಡ್ರೆ ಎಚ್ಚರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಡಿ .ಎಸ್.ಗಟ್ಟಿ ಸಹಿತ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!